ಬೆಂಗಳೂರು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಹೈಕೋರ್ಟ್‌ಗೆ ಮೊರೆ; ಕಾರಣವೇನು ಗೊತ್ತೇ ?

ಬೆಂಗಳೂರು, ಎ.3: ಕ್ಲಿಷ್ಟಕರ ಕೆಲಸದ ವಾತಾವರಣ, ಕಳಪೆ ಆಹಾರ, ಭತ್ಯೆಗಳಿಗೆ ಖೋತಾ ಹಾಗೂ ಮೇಲಧಿಕಾರಿಗಳ ಕಿರುಕುಳದ ಬಗ್ಗೆ ಇಲಾಖೆ ಮಟ್ಟದಲ್ಲಿ ದೂರು ನೀಡುವುದರಿಂದ ಹಿಡಿದು, ಪ್ರಧಾನಿ ಕಚೇರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗದಿರುವ ಹಿನ್ನೆಲೆಯಲ್ಲಿ ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 200 ಮಂದಿ ಸಿಐಎಸ್‌ಎಫ್ ಪೊಲೀಸರು ಇದೀಗ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ ಕಳಪೆ ಕೆಲಸದ ಸ್ಥಿತಿಗತಿಗೆ ಇದು ಕನ್ನಡಿಯಾಗಿದ್ದು, ಕಳೆದ ಮೂರು ವರ್ಷಗಳಲ್ಲಿ ದೇಶದಲ್ಲಿ ಒಟ್ಟು 344 ಮಂದಿ ಕೇಂದ್ರೀಯ ಸಶಸ್ತ್ರಪಡೆ ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2017ರ ಮೊದಲ ಮೂರು ತಿಂಗಳಲ್ಲೇ 15 ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಗೃಹ ಸಚಿವಾಲಯದ ಅಂಕಿ ಅಂಶಗಳು ಹೇಳುತ್ತವೆ.
ಈ ಪೈಕಿ ಶೇಕಡ 15ರಷ್ಟು ಮಂದಿ ಅಂದರೆ 53 ಮಂದಿ ಸಿಐಎಸ್‌ಎಫ್ ಯೋಧರು. ಸಶಸ್ತ್ರ ಭದ್ರತಾ ಪಡೆ ಸಿಬ್ಬಂದಿ ತಮ್ಮ ಸಹೋದ್ಯೋಗಿಗಳನ್ನೇ ಗುಂಡಿಟ್ಟು ಕೊಂದ 25 ಪ್ರಕರಣಗಳಲ್ಲಿ 13 ಮಂದಿ ಸಿಐಎಸ್‌ಎಫ್ ಯೋಧರು ಸೇರಿದ್ದಾರೆ. ಕಳೆದ ಜನವರಿಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಒಬ್ಬ ಸಿಐಎಸ್‌ಎಫ್ ಯೋಧ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ವರದಿ ನೀಡಿದ್ದರು.
ಆದರೆ ಇಲ್ಲಿನ ಕೆಲಸದ ವಾತಾವರಣವೇ ಸರಿ ಇಲ್ಲ ಎನ್ನುವುದು ಬಹುತೇಕ ಯೋಧರ ಒಕ್ಕೊರಲ ಅಭಿಪ್ರಾಯ. "ಕಳಪೆ ಗುಣಮಟ್ಟದ ಆಹಾರವನ್ನು ನಮಗೆ ನೀಡಲಾಗುತ್ತದೆ. ಯಾವ ಬಿಡುವೂ ಇಲ್ಲದೇ ನಿರಂತರ ಶಿಫ್ಟ್‌ಗಳಲ್ಲಿ ಕೆಲಸ ಮಾಡಿಸಲಾಗುತ್ತದೆ. ಜತೆಗೆ ಮನೆಬಾಡಿಗೆ ಹಾಗೂ ಸಾರಿಗೆ ಭತ್ಯೆಯನ್ನೂ ನೀಡುತ್ತಿಲ್ಲ. ಇಷ್ಟು ಸಾಲದೆಂಬಂತೆ ಹಿರಿಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದು, ಕೆಲವೊಮ್ಮೆ ವೇತನವನ್ನು ಕಡಿತಗೊಳಿಸುವ ನಿದರ್ಶನಗಳೂ ಇವೆ" ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಯೋಧರೊಬ್ಬರು ವಿವರಿಸಿದ್ದಾರೆ.







