ಆರೆಸ್ಸೆಸ್ ಗೆ ಪ್ರತಿಯಾಗಿ ಡಿಎಸ್ಸೆಸ್ ಪ್ರಾರಂಭಿಸಿದ ಲಾಲು ಪುತ್ರ ತೇಜ್ ಪ್ರತಾಪ್

ಪಾಟ್ನಾ, ಎ.3: ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಪ್ರತಿಯಾಗಿ ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ಹಾಗೂ ಬಿಹಾರ ಆರೋಗ್ಯ ಸಚಿವ ತೇಜ್ ಪ್ರತಾಪ್ ಸಿಂಗ್ ಅವರು ಧರ್ಮನಿರಪೇಕ್ಷ ಸೇವಕ್ ಸಂಘ್ (ಡಿಎಸ್ಸೆಸ್) ಎಂಬ ಯುವ ಸಂಘಟನೆಯ ಆರಂಭವನ್ನು ಘೋಷಿಸಿದ್ದಾರೆ. ‘‘ಇದು ಕೇವಲ ಒಂದು ಟ್ರೈಲರ್, ಸಂಪೂರ್ಣ ಚಿತ್ರಣ ಇನ್ನಷ್ಟೇ ಹೊರಬರಬೇಕಿದೆ’’ ಎಂದು ಈ ಸಂದರ್ಭ ತೇಜ್ ಪ್ರತಾಪ್ ಹೇಳಿದ್ದಾರೆ.
‘‘ಇಂದು ಆರೆಸ್ಸೆಸ್ ಧಾರ್ಮಿಕ ಮೂಲಭೂತವಾದವನ್ನು ಪಸರಿಸಿ ದೇಶದಲ್ಲಿ ತನ್ನ ವಿಭಜನಾತ್ಮಕ ಸಿದ್ಧಾಂತದ ಬೀಜವನ್ನು ಬಿತ್ತುತ್ತಿದೆ. ಆದರೆ ಅವುಗಳಿಗೆ ಡಿಎಸ್ಸೆಸ್ ಸಡ್ಡು ಹೊಡೆಯಲಿದೆ.’’ ಎಂದು ಪಾಟ್ನಾದಲ್ಲಿ ತಮ್ಮ ಬೆಂಬಲಿಗರೊಡಗೂಡಿ ಆಯೋಜಿಸಿದ್ದ ರಥಯಾತ್ರೆಯ ಸಂದರ್ಭ ಅವರು ಹೇಳಿದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಂದ ಸ್ಥಾಪಿತವಾದ ಹಿಂದು ಯುವ ವಾಹಿನಿ ಬಿಹಾರವನ್ನೂ ಪ್ರವೇಶಿಸಲೆತ್ನಿಸುತ್ತಿದ್ದರೂ ಅದಕ್ಕೆ ಡಿಎಸ್ಸೆಸ್ ತಡೆಯೊಡ್ಡಲಿದೆ. ಶಾಂತಿ ಸಾಮರಸ್ಯ ಕಾಪಾಡುವುದೇ ಡಿಎಸ್ಸೆಸ್ ಗುರಿ ಎಂದು ವೈಶಾಲಿ ಜಿಲ್ಲೆಯ ಮಹುವಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ತೇಜ್ ಪ್ರತಾಪ್ ಹೇಳಿದರು.
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ, ತೇಜ್ ಪ್ರತಾಪ್ ಅವರು ಮೊದಲು ಆರೆಸ್ಸೆಸ್ ಸೇರಿ ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯಬೇಕು ಎಂದರು. ‘‘ಅವರ ಸಂಘಟನೆಗೆ ಯಶಸ್ಸು ಕೋರುತ್ತೇನೆ. ಆದರೆ ಮೊದಲು ಅವರು ಆರೆಸ್ಸೆಸ್ ಸೇರಿ ಅದರ ಸಮವಸ್ತ್ರ ಧರಿಸಿ ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿ ಅನುಭವ ಪಡೆಯಬೇಕು,’’ ಎಂದು ಅವರು ವ್ಯಂಗ್ಯವಾಡಿದ್ದಾರೆ.