ದಿಲ್ಲಿಯ ಹಿರಿಯ ಕಾಂಗ್ರೆಸ್ ಮುಖಂಡ ವಾಲಿಯಾ ರಾಜೀನಾಮೆ

ಹೊಸದಿಲ್ಲಿ, ಎ.3: ಪಕ್ಷದಲ್ಲಿ ನನ್ನ ಮಾತಿಗೆ ಬೆಲೆಯಿಲ್ಲ ಎಂದು ಕಾಂಗ್ರೆಸ್ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ದಿಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕ ಡಾ. ಎ.ಕೆ. ವಾಲಿಯಾ ಸೋಮವಾರ ರಾಜೀನಾಮೆ ನೀಡಿದ್ದಾರೆ. ದಿಲ್ಲಿ ಮುನ್ಸಿಪಲ್ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ನಡೆದಿರುವ ಈ ಬೆಳವಣಿಗೆಯು ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಿ ಪರಿಣಮಿಸಿದೆ.
ಪಕ್ಷದ ಕಾರ್ಯಕರ್ತರ ತಳಮಟ್ಟದ ಪ್ರಯತ್ನವನ್ನು ಪಕ್ಷ ನಿರ್ಲಕ್ಷಿಸುತ್ತಿದೆ. ದಿಲ್ಲಿ ಮುನ್ಸಿಪಲ್ ಚುನಾವಣೆಯಲ್ಲಿ ಹೊರಗಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ ಎಂದು ವಾಲಿಯಾ ಪಕ್ಷದ ಟಿಕೆಟ್ ಹಂಚಿಕೆಯ ಬಗ್ಗೆಯೂ ಅಸಮಾಧಾನ ಹೊರಹಾಕಿದ್ದಾರೆ.
ಡಾ.ವಾಲಿಯಾ ಉತ್ತರ ದಿಲ್ಲಿಯಲ್ಲಿ ಹೆಚ್ಚಿನ ಹಿಡಿತ ಹೊಂದಿದ್ದು, ವೃತ್ತಿಯಲ್ಲಿ ವೈದ್ಯರಾಗಿರುವ ವಾಲಿಯಾ ದಿಲ್ಲಿಯಲ್ಲಿ ಶೀಲಾ ದೀಕ್ಷಿತ್ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಕಾಂಗ್ರೆಸ್‌ನಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು. 2 ವರ್ಷಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ಬಳಿಕ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿತ್ತು. ಪಕ್ಷವನ್ನು ಸಂಘಟಿಸಲು ಯತ್ನ ನಡೆಯುತ್ತಿತ್ತು.
ದಿಲ್ಲಿ ಕಾಂಗ್ರೆಸ್‌ನ ಇನ್ನೊಬ್ಬ ನಾಯಕ ಅಜಯ್ ಮಕೆನ್ ಹಾಗೂ ಡಾ. ವಾಲಿಯಾ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ನಾನು ಅವರಿಗೆ ಕರೆ ಮಾಡಿದರೂ ಅದಕ್ಕೆ ಅವರು ಉತ್ತರ ನೀಡುವುದಿಲ್ಲ ಎಂದು ವಾಲಿಯಾ ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಎಂಸಿಡಿ ಚುನಾವಣೆ ಈ ತಿಂಗಳು ನಡೆಯಲಿದ್ದು, ದಿಲ್ಲಿಯಲ್ಲಿ ತಮ್ಮ ಶಕ್ತಿ ಪ್ರದರ್ಶಿಸಲು ಎಲ್ಲ ಪಕ್ಷಗಳಿಗೆ ಇದೊಂದು ಅಗ್ನಿ ಪರೀಕ್ಷೆಯಾಗಿದೆ.