ಉತ್ತರಪ್ರದೇಶದಲ್ಲಿ ಮರ್ಯಾದಾ ಹತ್ಯೆ: ಆರೋಪಿಯ ಬಂಧನ

ಲಕ್ನೋ, ಎ.3: ಕುಟುಂಬದ ಗೌರವವನ್ನು ಉಳಿಸಿಕೊಳ್ಳುವ ಸಲುವಾಗಿ ವ್ಯಕ್ತಿಯೊಬ್ಬ ತನ್ನ 19ರ ಹರೆಯದ ಪುತ್ರಿ ಹಾಗೂ ಆತನ ಪ್ರಿಯತಮನನ್ನು ಹತ್ಯೆಗೈದಿರುವ ಘಟನೆ ಉತ್ತರಪ್ರದೇಶದ ಕುಲಪಹರ್ ಜಿಲ್ಲೆಯಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿ ಆರೋಪಿಯನ್ನು ಸೋಮವಾರ ಬೆಳಗ್ಗೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಮಾಡಿರುವ ಆರೋಪಿಯನ್ನು ಮೂಲ್‌ಚಂದ್ ಅಹಿವಾರ್ ಎಂದು ಗುರುತಿಸಿಲಾಗಿದ್ದು, ಕುಟುಂಬದ ಮರ್ಯಾದೆ ಕಾಪಾಡುವ ಉದ್ದೇಶದಿಂದ ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯ ಪುತ್ರಿ ಗೀತಾ ಹಾಗೂ ಸುನೀಲ್ ನಡುವೆ ಕಳೆದ ವರ್ಷ ಪ್ರೇಮಾಂಕುರವಾಗಿತ್ತು. ಇದೇ ಶನಿವಾರ ವಿವಾಹವಾಗಲು ನಿರ್ಧರಿಸಿದ್ದರು. ಪುತ್ರಿ ಗೀತಾ, ಸುನೀಲ್‌ನನ್ನು ಪ್ರೀತಿಸುತ್ತಿದ್ದ ವಿಷಯ ತಿಳಿದುಕೊಂಡ ಮೂಲ್‌ಚಂದ್ ತನ್ನ ಮಗಳಿಗೆ ಮದುವೆಯನ್ನು ನಿಶ್ಚಯಗೊಳಿಸಿದ್ದ. ತನ್ನ ಪುತ್ರಿಯನ್ನು ಹಿಂಬಾಲಿಸದಂತೆ ಸುನೀಲ್‌ಗೆ ಎಚ್ಚರಿಕೆಯನ್ನು ನೀಡಿದ್ದ.
ಶನಿವಾರ ರಾತ್ರಿ ಮೂಲ್‌ಚಂದ್ ಇರದ ಹೊತ್ತಿನಲ್ಲಿ ಸುನೀಲ್, ಗೀತಾಳ ಮನೆಗೆ ಬಂದಿದ್ದ. ಸೋಮವಾರ ಬೆಳಗ್ಗೆ ತನ್ನ ಪುತ್ರಿ ಹಾಗೂ ಸುನೀಲ್ ಮಾತನಾಡುತ್ತಿದ್ದನ್ನು ಮೂಲ್‌ಚಂದ್ ನೋಡಿದ್ದಾನೆ. ಇದರಿಂದ ಕೆರಳಿದ ಮೂಲ್‌ಚಂದ್ ಕೊಡಲಿಯಿಂದ ಇಬ್ಬರನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.
ಆರೋಪಿಯನ್ನು ಬಂಧಿಸಿದ ಗ್ರಾಮಸ್ಥರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಕೊಲೆಗೆ ಬಳಸಲಾದ ಅಸ್ತ್ರವನ್ನು ಆತನ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಕೆ.ವಿನೋದ್ ಸಿಂಗ್ ತಿಳಿಸಿದ್ದಾರೆ.