ಚರ್ಚ್‌ಗಳಿಗೆ ನುಗ್ಗಿ ಕಳವು ಪ್ರಕರಣ; ಮೂವರ ಬಂಧನ

ಬೆಂಗಳೂರು, ಎ.3: ತಮಿಳುನಾಡಿನ ಪ್ರಸಿದ್ಧ ವೇಲಾಂಗಣಿ ಚರ್ಚ್ ಸೇರಿ ಕೇರಳದ ನಾಲ್ಕು ಚರ್ಚ್‌ಗಳಿಗೆ ನುಗ್ಗಿ ಹುಂಡಿ ಹೊಡೆದು ನಗದು, ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣ ಸಂಬಂಧ ಮೂವರನ್ನು ಬಂಧಿಸುವಲ್ಲಿ ಬೊಮ್ಮನಹಳ್ಳಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಕೇರಳದ ಎರ್ನಾಕುಲಂನ ಸೂರ್ಯ ಯಾನೆ ಅಲೆಕ್ಸ್ (29), ಕಣ್ಣೂರಿನ ಸುಜೋಯ್(35), ತಮಿಳುನಾಡಿನ ಮಧುರೈ ನಿವಾಸಿ ಜಯಪ್ರಕಾಶ್ ಯಾನೆ ಜೆ.ಪಿ. (35) ಎಂದು ಸೋಮವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಮಾಹಿತಿ ನೀಡಿದರು.
ಪ್ರಕರಣದ ಹಿನ್ನೆಲೆ: ಜನವರಿ 31ರಂದು ವೇಲಾಂಗಣಿ ಚರ್ಚ್ ಕಚೇರಿಗೆ ನುಗ್ಗಿದ ಮೂವರು ಚರ್ಚ್ ಹುಂಡಿಯನ್ನು ಹೊಡೆದು 60 ಗ್ರಾಂ ಚಿನ್ನ, 2.5 ಲಕ್ಷ ನಗದು, ದೇಶಿ ನಾಣ್ಯಗಳನ್ನು ಕಳವು ಮಾಡಿದ್ದರು. ಇದಲ್ಲದೆ, ಕೇರಳದಲ್ಲಿ 4 ಚರ್ಚ್‌ಗಳಿಗೆ ನುಗ್ಗಿ ಹುಂಡಿ ಹೊಡೆದು ದೇಶಿ ನಾಣ್ಯಗಳು ಹಾಗೂ 75 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆಂದು ತಿಳಿಸಿದರು.
ಆರೋಪಿ ಅಲೆಕ್ಸ್ ಕೇರಳದಲ್ಲಿ ಕಳವು ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದು, ತನ್ನ ಸ್ನೇಹಿತನ ಕ್ಯಾನ್ಸರ್ ಕಾಯಿಲೆಯ ಚಿಕಿತ್ಸೆಗಾಗಿ 2011ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿ ಅಲ್ಲಿಂದ ಸೆಂಟ್ರಲ್ ಮಡಿವಾಳ, ಜೆಪಿನಗರ, ಕಬ್ಬನ್‌ಪಾರ್ಕ್, ಮಾದನಾಯಕನಹಳ್ಳಿ ಸೇರಿ ಇನ್ನಿತರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ ಎಂದರು.
ಚರ್ಚ್‌ಗಳಿಗೆ ನುಗ್ಗಿ ಕಳವು ಮಾಡಿದ್ದಲ್ಲದೆ, ತಮಿಳುನಾಡು, ಗೋವಾದಲ್ಲಿ ರಾತ್ರಿ ವೇಳೆ ಕಾರು, ಟೆಂಪೊ ಟ್ರಾವೆಲರ್ ಸೇರಿ ನಾಲ್ಕು ಚಕ್ರದ ವಾಹನಗಳನ್ನು ಕಳವು ಮಾಡುತ್ತಿದ್ದರು. ಪ್ರಕರಣ ಸಂಬಂಧ ವೇಲಾಂಗಣಿ ಚರ್ಚ್‌ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಆರೋಪಿಗಳು ಕಳವು ಮಾಡಿದ ಕೃತ್ಯಗಳು ದಾಖಲಾಗಿದ್ದರೂ, ಆರೋಪಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.
ಅಲ್ಲದೆ, ವಾಹನ ಕಳವು ಪ್ರಕರಣ ಸಂಬಂಧ ತನಿಖೆ ತೀವ್ರಗೊಳಿಸಿದ ಬೊಮ್ಮನಹಳ್ಳಿ ಠಾಣಾ ಪೊಲೀಸರು, ಆರೋಪಿ ಜಯಪ್ರಕಾಶ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಉಳಿದ ಆರೋಪಿಗಳ ಜತೆ ಚರ್ಚ್‌ಗಳಿಗೆ ನುಗ್ಗಿ ಕಳವು ಮಾಡಿರುವ ಬಗ್ಗೆ ಹೇಳಿದ್ದಾನೆ ಎಂದು ಹೇಮಂತ್ ನಿಂಬಾಳ್ಕರ್ ಮಾಹಿತಿ ನೀಡಿದರು.
ಬಂಧಿತ ಆರೋಪಿಗಳಿಂದ 40 ಲಕ್ಷ ಮೌಲ್ಯದ 6 ವಾಹನಗಳು ಸೇರಿ ನಗದು, ಚಿನ್ನಾಭರಣ ವಶಕ್ಕೆ ಪಡೆದು, ತನಿಖೆ ಮುಂದುವರೆಸಲಾಗಿದೆ.







