ಬೀಫ್ ಹೇಳಿಕೆ ವಿವಾದ: ನನ್ನ ಹೇಳಿಕೆ ತಿರುಚಲಾಗಿದೆ : ಶ್ರೀಪ್ರಕಾಶ್

ತಿರುವನಂತಪುರಂ, ಎ.3: ಮತ ಹಾಕಿದರೆ ಗುಣಮಟ್ಟದ ಬೀಫ್( ಗೋಮಾಂಸ) ಪೂರೈಸುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿರುವ ಮಲಪ್ಪುರಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಪ್ರಕಾಶ್ ಇದೀಗ ತನ್ನ ಹೇಳಿಕೆಯಿಂದ ಆಗಿರುವ ಗೊಂದಲವನ್ನು ತಿಳಿಗೊಳಿಸಲು ಯತ್ನಿಸಿದ್ದಾರೆ. ತನ್ನ ಹೇಳಿಕೆಯನ್ನು ತಿರುಚಲಾಗಿದೆ. ಮತ ಹಾಕಿದರೆ ಗುಣಮಟ್ಟದ ಆಹಾರಗಳನ್ನು ಜನರಿಗೆ ಒದಗಿಸುವುದಾಗಿ ತಾನು ಹೇಳಿಕೆ ನೀಡಿರುವುದಾಗಿ ತಿಳಿಸಿದ್ದಾರೆ.
ಗೋವಧೆಗೆ ತನ್ನ ವಿರೋಧವಿದೆ . ಈ ವಿಷಯದಲ್ಲಿ ಪಕ್ಷದ ರಾಷ್ಟ್ರೀಯ ನಿಲುವಿಗೆ ಬದ್ಧನಾಗಿರುವುದಾಗಿ ಶ್ರೀಪ್ರಕಾಶ್ ಹೇಳಿದ್ದಾರೆ. ಗೋಮಾಂಸ ನಿಷೇಧಿಸಬೇಕೇ ಬೇಡವೇ ಎಂಬುದನ್ನು ಕೇರಳ ಸರಕಾರ ನಿರ್ಧರಿಸಬೇಕು ಎಂದವರು ಹೇಳಿದ್ದಾರೆ. ಈ ಮಧ್ಯೆ ‘ಬೀಫ್’ ಹೇಳಿಕೆ ಕುರಿತು ಶ್ರೀಪ್ರಕಾಶ್‌ರಿಂದ ಸ್ಪಷ್ಟನೆ ಪಡೆಯುವುದಾಗಿ ಬಿಜೆಪಿ ರಾಜ್ಯಘಟಕ ತಿಳಿಸಿದೆ.
ಮಲಪ್ಪುರಂ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಶ್ರೀಪ್ರಕಾಶ್, ಭಾನುವಾರ ನಡೆದ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡುತ್ತಾ, ಎಪ್ರಿಲ್ 12ರಂದು ನಡೆಯುವ ಮತದಾನದಲ್ಲಿ ತನಗೆ ಮತ ಹಾಕಿದರೆ ಗುಣಮಟ್ಟದ ‘ಬೀಫ್’ ಒದಗಿಸುವುದಾಗಿ, ಮತ್ತು ಈ ನಿಟ್ಟಿನಲ್ಲಿ ಕಸಾಯಖಾನೆಗಳಿಗೆ ‘ಏರ್‌ಕಂಡಿಷನಿಂಗ್’ ವ್ಯವಸ್ಥೆ ಮಾಡುವುದಾಗಿ ಆಶ್ವಾಸನೆ ನೀಡಿದ್ದರು ಎಂದು ವರದಿಯಾಗಿತ್ತು.
ಶ್ರೀಪ್ರಕಾಶ್ ಅವರ ಹೇಳಿಕೆಯಿಂದ ಮುಜುಗುರಕ್ಕೆ ಒಳಗಾಗಿರುವ ಬಿಜೆಪಿ, ಈ ವಿವಾದಾತ್ಮಕ ಹೇಳಿಕೆ ಬಗ್ಗೆ ಅವರಿಂದ ಸ್ಪಷ್ಟನೆ ಪಡೆಯುವುದಾಗಿ ತಿಳಿಸಿದೆ. ಶ್ರೀಪ್ರಕಾಶ್ ಏನು ಹೇಳಿಕೆ ನೀಡಿದ್ದಾರೆಂಬುದು ನನಗೆ ನಿಖರವಾಗಿ ತಿಳಿದಿಲ್ಲ. ಅವರಿಂದ ಈ ಬಗ್ಗೆ ಹೇಳಿಕೆ ಪಡೆಯಲಾಗುವುದು ಎಂದು ಬಿಜೆಪಿ ಕೇರಳ ಘಟಕದ ಅಧ್ಯಕ್ಷ ಕುಮ್ಮನಮ್ ರಾಜಶೇಖರನ್ ಪಿಟಿಐಗೆ ತಿಳಿಸಿದ್ದಾರೆ. ರಾಜ್ಯದಲ್ಲಿ ಹಲವಾರು ಅಕ್ರಮ ಕಸಾಯಿಖಾನೆಗಳಿವೆ. ಇವುಗಳನ್ನು ಸಕ್ರಮಗೊಳಿಸುವ ಮತ್ತು ಆಧುನೀಕರಣಗೊಳಿಸುವ ಬಗ್ಗೆ ಶ್ರೀಪ್ರಕಾಶ್ ಮಾತಾಡಿದ್ದಾರೆ . ಆಹಾರ ಕ್ರಮ ಅವರವರ ಇಚ್ಛೆಗೆ ಬಿಟ್ಟ ವಿಷಯ. ಕೇರಳದಲ್ಲಿ ಜನರು ವಿವಿಧ ಆಹಾರಕ್ರಮ ಅನುಸರಿಸುತ್ತಿದ್ದಾರೆ. ಇದು ಚುನಾವಣೆ ಸಂದರ್ಭ ಚರ್ಚಿಸುವ ವಿಷಯವಲ್ಲ ಎಂದವರು ಹೇಳಿದ್ದಾರೆ.







