ದಾವಣಗೆರೆ ಸುತ್ತಮುತ್ತ ಭೂ ಕಂಪನ

ದಾವಣಗೆರೆ, ಎ.3: ತಾಲೂಕಿನ ಗ್ರಾಮವಾದ ಗಾಂಧೀನಗರದಲ್ಲಿ ಕಳೆದ ರಾತ್ರಿ ಭೂಮಿ ಕಂಪಿಸಿದ ಅನುಭವವಾಗಿದ್ದು, 20ಕ್ಕೂ ಹೆಚ್ಚು ಮನೆಗಳ ಮತ್ತು ಡಾಂಬಾರು ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.
ಇದರಿಂದ ಈ ಭಾಗದ ಜನರಲ್ಲಿ ಆತಂಕ ಮೂಡಿದ್ದು, ರವಿವಾರವಷ್ಟೇ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಯ ಕೆಲ ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಭೂ ಕಂಪನ ನಡೆದ ಸುದ್ದಿ ಕೇಳಿದ್ದ ಈ ಭಾಗದ ಜನರು ತಮ್ಮ ಊರಿನಲ್ಲಿ ಆಗಿರುವ ಘಟನೆಯಿಂದ ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ.
ರವಿವಾರ ರಾತ್ರಿ 12 ಗಂಟೆ ಸುಮಾರಿನಲ್ಲಿ ಭೂಮಿ ಕಂಪಿಸಿದ ಅನುಭವವಾದ ಕೂಡಲೇ ಗಾಂಧೀನಗರದ 20ಕ್ಕೂ ಹೆಚ್ಚು ಕುಟುಂಬಗಳ 30ಕ್ಕೂ ಹೆಚ್ಚು ಜನರು ಭಯದಿಂದ ಮನೆಗಳನ್ನು ತೊರೆದು ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣಕ್ಕೆ ಆಗಮಿಸಿದ ಅಲ್ಲಿಯೆ ಕಾಲ ಕಳೆದಿದ್ದಾರೆ.
ಬೆಳಕು ಹರಿದ ಮೇಲೆ ಮನೆಗಳಿಗೆ ಹೋಗಿ ನೋಡಿದಾಗ ತಮ್ಮ ಮನೆಯ ಗೋಡೆಗಳು ಮತ್ತು ಬಾಗಿಲುಗಳಲ್ಲಿ ಬಿರುಕು ಕಾಣಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಗ್ರಾಮದಲ್ಲಿ ರಸ್ತೆ ಸೇರಿದಂತೆ 200 ಮೀಟರ್ ದೂರದವರೆಗೂ ಭೂಮಿಯ ಬಿರುಕು ಹಾಗೆಯೇ ಮುಂದುವರಿದಿದೆ. ಗ್ರಾಮದ ಕೆಲವರಿಗೆ ಭೂಮಿ ಸಣ್ಣ ಪ್ರಮಾಣದಲ್ಲಿ ಕಂಪಿಸಿದ ಬಗ್ಗೆ ಗಮನಕ್ಕೆ ಬಂದಿದೆ. ಮನೆಗಳ ಗೋಡೆಗಳ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಮತ್ತೆ ಕೆಲವೆಡೆ ಸ್ವಲ್ಪ ಅಗಲವಾದ ಬಿರುಕುಗಳು ಕಾಣಿಸಿಕೊಂಡ ನಂತರ ಗ್ರಾಮಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಿ ಅವರಿಗೆ ವಿಷಯ ತಿಳಿಸಿದ್ದಾರೆ.
ತಹಶೀಲ್ದಾರ್ ಭೇಟಿ:
ಸ್ಥಳಕ್ಕೆ ತಹಶೀಲ್ದಾರ್ ಸಂತೋಷ್ ಕುಮಾರ್, ಹಿರಿಯ ಭೂ ತಜ್ಞ ಎಚ್.ಬಿ. ಮಲ್ಲೇಶ್ ಭೇಟಿ ನೀಡಿ ಮನೆ, ಜಮೀನು, ರಸ್ತೆ ಬಿರುಕು ಬಿಟ್ಟಿರೋದು ಪರಿಶೀಲಿಸಿದರು. ಇದು ಗಣಿಗಾರಿಕೆ ಪರಿಣಾಮ ಅಲ್ಲ, ಹೊಸದುರ್ಗದಲ್ಲಿ ಆದ ಭೂ ಕಂಪನದ ಎಫೆಕ್ಟ್. ಅಲ್ಲಿಯ ಕಂಪನದ ತರಂಗ ಇಲ್ಲಿಗೂ ಬಂದಿರಬಹುದು. ಈ ಬಗ್ಗೆ ಗೌರಿ ಬಿದನೂರಿನ ರಿಕ್ಟರ್ ಕೇಂದ್ರದಿಂದ ಮಾಹಿತಿ ತರಿಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.







