ಸಾಧನೆಗೆ ಪ್ರೋತ್ಸಾಹ ಸಿಎಂ ಪದಕ: ಕಮಿಷನರ್ ಚಂದ್ರಶೇಖರ್

ಮಂಗಳೂರು, ಎ.3: ಪೊಲೀಸರಿಗೆ ಸಿಎಂ ಪದಕ ಎನ್ನುವುದು ನಿಜಕ್ಕೂ ಗೌರವವಯುತ ಮತ್ತು ಮತ್ತಷ್ಟು ಸಾಧನೆಗೆ ಪ್ರೋತ್ಸಾಹಿಸುವ ಪದಕ. ಒಳ್ಳೆಯ ಸೇವೆ ಮಾಡಿದಾಗ ಖಂಡಿತ ಒಂದಲ್ಲ ಒಂದು ದಿನ ಯಶಸ್ಸು ಸಿಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್ ಹೇಳಿದ್ದಾರೆ.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಮುಖ್ಯಮಂತ್ರಿಗಳ ಪದಕ ವಿಜೇತ ಪೊಲೀಸರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯ (ಮಂಗಳೂರು ನಗರ ಸೇರಿ) ಎಂಟು ಮಂದಿಗೆ ಪ್ರಸಕ್ತ ಸಾಲಿನಲ್ಲಿ ಮುಖ್ಯಮಂತ್ರಿ ಪದಕ ಲಭ್ಯವಾಗಿದೆ. ಮಂಗಳೂರು ನಗರ ವ್ಯಾಪ್ತಿಗೆ 2015ರಲ್ಲಿ 2, 2016ರಲ್ಲಿ 4, 2017ರಲ್ಲಿ 6 ಪದಕ ದಕ್ಕಿರುವುದು ಪೊಲೀಸರ ಸಾಧನೆಯನ್ನು ತೋರಿಸುತ್ತದೆ. ಬೆಂಗಳೂರು ಬಳಿಕ ಅತಿ ಹೆಚ್ಚು ಚಿನ್ನದ ಪದಕ ಸಾಲಿನಲ್ಲಿ ದಕ್ಷಿಣ ಕನ್ನಡವಿದೆ. ಪೊಲೀಸ್ ಇಲಾಖೆಯಲ್ಲಿ ಸೇವೆ ಮತ್ತು ಶ್ರಮ ಪ್ರಮುಖವಾಗುತ್ತದೆ. ಈ ನಿಟ್ಟಿನಲ್ಲಿ ಕುಟುಂಬದ ಸಹಕಾರವೂ ಅತೀ ಅಗತ್ಯವಾಗಿರುತ್ತದೆ. ಕುಟುಂಬದ ಸಹಕಾರವಿಲ್ಲದೆ ಯಾವ ಸಾಧನೆಯೂ ಅಸಾಧ್ಯ. ಸಿಎಂ ಪದಕ ಗಳಿಸುವವರ ಯಶಸ್ಸಿನಲ್ಲಿ ಮನೆ ಮಹಿಳೆಯರ ಪಾತ್ರವೂ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ಪಿ ಭೂಷಣ್ ಗುಲಾಬ್ ರಾವ್ ಬೊರಸೆ ಮಾತನಾಡಿ, ಎದೆಗೆ ಮುಖ್ಯಮಂತ್ರಿ ಪದಕ ಬಿದ್ದರೆ, ತಲೆಗೆ ಜವಾಬ್ದಾರಿ ಹೆಚ್ಚಾಯ್ತು ಎಂದು ತಿಳಿದುಕೊಳ್ಳಬೇಕು. ಕೆಲಸದಲ್ಲಿ ಶ್ರದ್ಧೆ, ಸೃಜನಶೀಲತೆಯಿದ್ದಾಗ ಲ ಸಿಗುತ್ತದೆ ನಾವು ಮಾಡುವ ಕೆಲಸ ವೃತ್ತಿಪರತೆಯಿದ್ದಾಗ ಗುರುತಿಸುವ ಕೆಲಸ ಅದಾಗಿಯೇ ನೆರವೇರುತ್ತದೆ ಎಂದರು.
ಈ ಸಂದರ್ಭ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಶಾಂತರಾಜು, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಡಾ. ಸಂಜೀವ್ ಪಾಟೀಲ್, ಎಸಿಪಿಗಳಾದ ತಿಲಕ್‌ಚಂದ್ರ, ಶ್ರುತಿ ಉಪಸ್ಥಿತರಿದ್ದರು. ಎಸಿಪಿ ಉದಯ ನಾಯ್ಕಿ ಧನ್ಯವಾದ ನೀಡಿದರು. ಎಎಸ್‌ಐ ಹರೀಶ್ ನಿರೂಪಿಸಿದರು.
ಪದಕ ವಿಜೇತರಿವರು:
ಕಮಿಷನರೇಟ್ ವ್ಯಾಪ್ತಿಯ ಎಸಿಪಿ ರಾಜೇಂದ್ರ, ಇನ್‌ಸ್ಪೆಕ್ಟರ್ ಕೆ.ಯು. ಬೆಳ್ಳಿಯಪ್ಪ, ಬರ್ಕೆ ಎಸ್‌ಐ ನರೇಂದ್ರ, ಸಿಆರ್‌ನ ರಾಮಣ್ಣ ಪೂಜಾರಿ, ಸಿಸಿಬಿ ರಾಜೇಂದ್ರ ಪ್ರಸಾದ್, ಉಳ್ಳಾಲ ಠಾಣೆಯ ರವಿಚಂದ್ರ, ಎಸ್ಪಿ ವ್ಯಾಪ್ತಿಯ ಇನ್‌ಸ್ಪೆಕ್ಟರ್ ಅಮಾನುಲ್ಲಾರ, ಸಿಪಿಸಿ ತಾರನಾಥ ಪ್ರಸಕ್ತ ಸಾಲಿನ ಮುಖ್ಯಮಂತ್ರಿ ಪದಕ ವಿಜೇತರು.







