ರಾಜ್ಯದಲ್ಲಿರುವುದು ಅತ್ಯಂತ ಕೆಟ್ಟ ಸರಕಾರ: ಎಸ್.ಎಂ.ಕೃಷ್ಣ

ನಂಜನಗೂಡು, ಎ.3: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ನನ್ನ 55 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಕಂಡ ಅತ್ಯಂತ ಕೆಟ್ಟ ಸರಕಾರ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.
ನಂಜನಗೂಡಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನಾನು ಕೆ.ಸಿ.ರೆಡ್ಡಿ ಸೇರಿದಂತೆ ಹಲವು ಮುಖ್ಯಮಂತ್ರಿಗಳನ್ನು ನೋಡಿದ್ದೇನೆ, ಹಲವರೊಡನೆ ಕೆಲಸ ಮಾಡಿದ್ದೇನೆ, ಸ್ವತಃ ಆಡಳಿತ ನಡೆಸಿದ್ದೇನೆ. ಆದರೆ ಇದು ಯಾವ ದೂರದೃಷ್ಟಿಯಿಲ್ಲದ ಸರ್ಕಾರ. ಆಡಳಿತ ನಡೆಸಲು ಇರಬೇಕಾದ ಯಾವ ಮಾನದಂಡವೂ ಈ ಸರಕಾರಕ್ಕಿಲ್ಲ ಎಂದರು.
ಸಂಜೆ ಆಫೀಸ್ ಬಾಗಿಲು ಮುಚ್ಚಿಕೊಂಡು ಮನೆಗೆ ಹೋಗಿ ಮತ್ತೆ ಬೆಳಗ್ಗೆ 11ಕ್ಕೆ ಬಾಗಿಲು ತೆರೆಯುವಂತೆ ಅಲ್ಲ ಸರ್ಕಾರ ಎಂದರೆ. ದಿನದ 24 ತಾಸುಗಳ ಕಾಲ ಕೆಲಸ ಮಾಡಬೇಕಾದ ಜವಾಬ್ದಾರಿ ಅದರ ಮೇಲಿದೆ. ನರೇಂದ್ರ ಮೋದಿ ಅವರು 9 ದಿನ ಉಪವಾಸ ಮಾಡಿಯೂ ರಾತ್ರಿ 12 ಗಂಟೆಯವರೆಗೆ ಕೆಲಸ ಮಾಡುತ್ತಾರೆ. ರಾಜ್ಯ, ರಾಷ್ಟ್ರವನ್ನು ಹೇಗೆ ಕಟ್ಟಬೇಕು ಎಂಬ ದೂರದೃಷ್ಟಿ ಉಳ್ಳವರು ಮೋದಿ. ಆದರೆ ಇಂಥ ಯಾವ ಗುಣಗಳೂ ಇಲ್ಲದವರಿಂದ ಕರ್ನಾಟಕದಲ್ಲಿ ಯಾವುದೇ ಅಭಿವೃದ್ಧಿ ನೋಡಲಾಗದು. ಇಂದು ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ನಿಂತ ನೀರಾಗಿದೆ ಎಂದು ಅವರು ಹೇಳಿದರು.
ಶ್ರೀನಿವಾಸ ಪ್ರಸಾದ್ ಅವರ ಸ್ವಾಭಿಮಾನದ ಬಾವುಟವನ್ನು ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಅತಿ ಎತ್ತರದಲ್ಲಿ ಹಾರಿಸುವ ಜವಾಬ್ದಾರಿ ಇಲ್ಲಿನ ಜನತೆಯ ಮೇಲಿದ್ದು ಅವರನ್ನು ಮತ್ತೆ ರಾಜ್ಯ ವಿಧಾನಸಭೆಗೆ ಆರಿಸಿ ಕಳುಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಮನವಿ ಮಾಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಹಾಗೂ ನಾಯಕತ್ವ ವಿಶ್ವದಲ್ಲಿ ಮಾನ್ಯತೆ ಪಡೆದಿದೆ. ರಷ್ಯಾ ಮತ್ತು ಚೀನಾದಲ್ಲಿ ಪ್ರಬಲ ಅಧ್ಯಕ್ಷರಿದ್ದಾರೆ. ಅಮೆರಿಕಾದಲ್ಲಿ ಒಬಾಮ ಅವರು ಉತ್ತಮ ರೀತಿಯ ಆಡಳಿತ ನಡೆಸಿದರು. ಅದರಂತೆಯೇ ನಮ್ಮ ದೇಶದಲ್ಲಿ ಸಹಾ ಮೋದಿ ಅವರು ಪ್ರಬಲವಾದ ನಾಯಕತ್ವ ನೀಡಿದ್ದಾರೆ. ಅಭಿವೃದ್ಧಿಶೀಲ ರಾಷ್ಟ್ರ ಎಂದು ಕರೆಯಲ್ಪಡುತ್ತಿದ್ದ ಭಾರತ ಇಂದು ಅಬಿವೃದ್ಧಿ ಹೊಂದಿದ ದೇಶ ಎಂದು ಪರಿಗಣಿಸಲ್ಪಟ್ಟಿದೆ. ಇನ್ನು ಹತ್ತು ವರ್ಷಗಳಲ್ಲಿ ನಮ್ಮ ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪೈಕಿ ಅಗ್ರಸ್ಥಾನದಲ್ಲಿರುತ್ತದೆ ಎಂದು ಬಣ್ಣಿಸಿದ ಎಸ್.ಎಂ.ಕೃಷ್ಣ ಅವರು ನಮ್ಮ ದೇಶದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ನಾನು ಬಿಜೆಪಿಗೆ ಸೇರಿದ್ದೇನೆ. ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುಂದುವರಿಸುವ ಬಿಜೆಪಿಯ ಕೈಂಕರ್ಯಕ್ಕೆ ಬೆಂಬಲವಾಗಿ ನಿಲ್ಲಲಿದ್ದೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ವಿ.ಶ್ರೀನಿವಾಸ ಪ್ರಸಾದ್ ಮಾತನಾಡಿ, ನನ್ನ ರಾಜಕೀಯ ಜೀವನದಲ್ಲಿ ಎಸ್.ಎಂ.ಕೃಷ್ಣ ಅವರು ನಾನು ಹೆಚ್ಚು ಇಷ್ಟಪಡುವ ನಾಯಕರು. ಅವಿಭಜಿತ ಕಾಂಗ್ರೆಸ್ ಪಕ್ಷದಲ್ಲಿ ಪಕ್ಷವನ್ನು ಬಲಪಡಿಸುವ ಜವಾಬ್ದಾರಿಯನ್ನು ಹೊಂದಿದ್ದ ಎಸ್.ಎಂ.ಕೃಷ್ಣ ಅವರು ಉತ್ತಮ ಸಂಘಟಕರು. ಇಂದು ಅವರು ನನ್ನ ಪರ ಪ್ರಚಾರಕ್ಕೆ ಬಂದಿರುವುದರಿಂದ ನನಗೆ ಹೆಚ್ಚಿನ ಬಲ ಬಂದಿದೆ. ಅವರ ಆಶೀರ್ವಾದ ಸಿಕ್ಕಿರುವುದಕ್ಕೆ ಸಂತೋಷವಾಗಿದೆ. ಇದುವರೆಗೆ ಇದ್ದ ವಿಶ್ವಾಸ ಇಮ್ಮಡಿಯಾಗಿ ಆತ್ಮಸ್ಥೈರ್ಯ ಹೆಚ್ಚಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ, ಎಸ್.ಎ.ರಾಮದಾಸ್, ವಿ.ಸೋಮಣ್ಣ, ಬಿ.ಎನ್.ಬಚ್ಚೇಗೌಡ, ಮಾಜಿ ಶಾಸಕ ಶ್ರೀನಿವಾಸಯ್ಯ, ಬಿಜೆಪಿ ಜಿಲ್ಲಾಧ್ಯಕ್ಷರಾದ ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ಪ್ರಧಾನ ಕಾರ್ಯದರ್ಶಿ ಎನ್.ವಿ.ಫಣೀಶ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಸಿ.ಬಸವೇಗೌಡ, ಬಿ.ಪಿ.ಮಂಜುನಾಥ್, ಎಲ್.ನಾಗೇಂದ್ರ, ಕೆ.ಆರ್.ಮೋಹನ್‍ಕುಮಾರ್, ಮುಖಂಡರಾದ ಬಿ.ಪಿ.ಬೋರೇಗೌಡ, ಜಯದೇವ್, ಶಂಕರ್ ಮಹಾದೇವ ಬಿದರಿ, ಮತ್ತಿತರರು ಹಾಜರಿದ್ದರು.







