ಭಾರತೀಯ ಟೆಕ್ಕಿಗಳಿಗೆ ಮತ್ತೊಂದು ಆಘಾತ: ಉದ್ಯೋಗ ವೀಸ ಕಾನೂನು ಬಿಗಿಗೊಳಿಸಿದ ಸಿಂಗಾಪುರ

ಹೊಸದಿಲ್ಲಿ, ಎ.3: ಅಮೆರಿಕ ಉದ್ಯೋಗ ವೀಸ ನಿಯಮವನ್ನು ಬಿಗಿಗೊಳಿಸಿದ ಬಳಿಕ ಇದೀಗ ಸಿಂಗಾಪುರದ ಸರದಿ. ಸಮಗ್ರ ಆರ್ಥಿಕ ಸಹಕಾರ ಒಪ್ಪಂದವನ್ನು ತಡೆಹಿಡಿಯಲು ಸಿಂಗಾಪುರದ ಸರಕಾರ ನಿರ್ಧರಿಸಿರುವುದರಿಂದ ಭಾರತದ ಟೆಕ್ಕಿಗಳಿಗೆ (ತಂತ್ರಜ್ಞರಿಗೆ) ಸಿಂಗಾಪುರದಲ್ಲಿ ಉದ್ಯೋಗ ವೀಸ ಪಡೆಯಲು ತೊಂದರೆಯಾಗಲಿದೆ.
ಸ್ಥಳೀಯರನ್ನೇ ಕೆಲಸಕ್ಕೆ ನೇಮಿಸಿಕೊಳ್ಳುವಂತೆ ಸಿಂಗಾಪುರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಕಂಪನಿಗಳಿಗೆ ತಿಳಿಸಲಾಗಿರುವ ಹಿನ್ನೆಲೆಯಲ್ಲಿ ಇತರ ದೇಶಗಳತ್ತ ಈ ಕಂಪನಿಗಳು ಗಮನ ಹರಿಸಿವೆ ಎಂದು ವರದಿಯಾಗಿದೆ.
ಕೆಲವು ಸಮಯಗಳಿಂದ ವೀಸ ಸಮಸ್ಯೆಯ ಬಗ್ಗೆ ಚರ್ಚೆ ಸಾಗುತ್ತಿತ್ತು. ಆದರೆ 2016ರ ಬಳಿಕ ವೀಸ ನಿಯಮ ಬಿಗಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯರನ್ನೇ ಉದ್ಯೋಗದಲ್ಲಿ ನೇಮಿಸಿಕೊಳ್ಳುವಂತೆ ಎಲ್ಲಾ ಭಾರತೀಯ ಕಂಪನಿಗಳಿಗೆ ಸೂಚಿಸಲಾಗಿದೆ ಎಂದು ನಾಸ್‌ಕಾಮ್ (ನ್ಯಾಷನಲ್ ಅಸೋಸಿಯೇಷನ್ ಆಫ್ ಸಾಫ್ಟ್‌ವೇರ್ ಸರ್ವಿಸ್ ಕಂಪೆನೀಸ್) ಅಧ್ಯಕ್ಷ ಆರ್.ಚಂದ್ರಶೇಖರ್ ತಿಳಿಸಿದ್ದಾರೆ.
ಭಾರತವು ಇದೀಗ ಎಚ್-1ಬಿ ವೀಸ ವಿಷಯದಲ್ಲಿ ಉಂಟಾಗಿರುವ ಗೊಂದಲ ಮತ್ತು ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಅಮೆರಿಕದ ಸರಕಾರದೊಡನೆ ಮಾತುಕತೆ ಮುಂದುವರಿಸಿದೆ. ಉದ್ಯೋಗ ವೀಸ ಹೊಂದಿದವರು ತನ್ನ ಪತಿ/ಪತ್ನಿಗೆ ಉದ್ಯೋಗವನ್ನು ವರ್ಗಾಯಿಸುವ ಸೌಲಭ್ಯವನ್ನು ‘ಎಂಪ್ಲಾಯ್‌ಮೆಂಟ್ ಅಥೊರೈಸೇಷನ್ ಕಾರ್ಡ್’ ಮೂಲಕ ಈ ಹಿಂದಿನ ಒಬಾಮ ಸರಕಾರ ನೀಡಿತ್ತು. ಆದರೆ ಡೊನಾಲ್ಡ್ ಟ್ರಂಪ್ ನೇತೃತ್ವದ ನೂತನ ಸರಕಾರ ಇದನ್ನು ರದ್ದುಪಡಿಸಿದೆ. ಎಚ್-1 ಬಿ ವೀಸ ವಲಸೆ ರಹಿತ ವೀಸ ವ್ಯವಸ್ಥೆಯಾಗಿದ್ದು ಅಮೆರಿಕದ ಕಂಪನಿಗಳು ವಿದೇಶಿ ತಾಂತ್ರಿಕ ಪರಿಣತರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಭಾರತೀಯ ಐಟಿ ತಂತ್ರಜ್ಞರ ವಲಯದಲ್ಲಿ ಇದು ಅತ್ಯಂತ ಜನಪ್ರಿಯವಾಗಿತ್ತು ಮತ್ತು ಪ್ರತೀ ವರ್ಷ ಹತ್ತಾರು ಸಾವಿರ ಟೆಕ್ಕೀಗಳು ಅಮೆರಿಕದಲ್ಲಿ ಉದ್ಯೋಗ ಪಡೆಯುತ್ತಿದ್ದರು.







