ಇವಿಎಂ ಸಾಫ್ಟ್‌ವೇರ್ ಬಹಿರಂಗ ಪಡಿಸಿ: ಕೇಜ್ರಿವಾಲ್ ಆಗ್ರಹ

ಹೊಸದಿಲ್ಲಿ,ಎ.3: ಅತ್ಯಾಧುನಿಕ ಸಾಫ್ಟವೇರ್ ಬಳಸಿ ವಿದ್ಯುನ್ಮಾನ ಮತದಾನ ಯಂತ್ರ (ಇವಿಎಂ)ಗಳಲ್ಲಿ ಹಸ್ತಕ್ಷೇಪ ನಡೆಸುವುದು ಅಪಾಯಕಾರಿಯಾಗಿದೆ ಎಂದು ಸೋಮವಾರ ಇಲ್ಲಿ ಆರೋಪಿಸಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ ಅವರು, ಇವಿಎಂ ಸಾಫ್ಟ್‌ವೇರ್‌ನ್ನು ದೇಶದೆದುರು ಬಹಿರಂಗಗೊಳಿಸುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದರು.
ಇತ್ತೀಚಿಗೆ ಚುನಾವಣೆ ನಡೆದಿರುವ ಉತ್ತರ ಪ್ರದೇಶದ ಕಾನ್ಪುರದಿಂದ 300 ಇವಿಎಂಗಳನ್ನು ಮಧ್ಯಪ್ರದೇಶ ವಿಧಾನಸಭಾ ಉಪಚುನಾವಣೆಗಾಗಿ ರವಾನಿಸಲಾಗಿದೆ. ತಾಂತ್ರಿಕವಾಗಿ ಚುನಾವಣಾ ಫಲಿತಾಂಶಗಳು ಪ್ರಕಟಗೊಂಡ 45 ದಿನಗಳವರೆಗೂ ಇವಿಎಂಗಳನ್ನು ಬಳಸುವಂತಿಲ್ಲ ಅಥವಾ ಸ್ಥಳಾಂತರಿಸುವಂತಿಲ್ಲ. ಹೀಗಿರುವಾಗ ಚುನಾವಣಾ ಆಯೋಗಕ್ಕೆ ಅವುಗಳನ್ನು ಸ್ಥಳಾಂತರಿಸುವ ಅನಿವಾರ್ಯತೆಯೇನಿತ್ತು? ಅದು ಕಾನೂನಿನ ಅಣಕವಾಡುತ್ತಿರುವಂತಿದೆ ಎಂದು ಹೇಳಿದ ಆಪ್ ಸಂಚಾಲಕರೂ ಆಗಿರುವ ಕೇಜ್ರಿವಾಲ, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಮೇ 11ರಂದು ಪ್ರಕಟಗೊಂಡಿದ್ದು, ಎ.26ರವರೆಗೆ ಇವಿಎಂಗಳನ್ನು ಸ್ಥಳಾಂತರಿ ಸುವಂತಿರಲಿಲ್ಲ ಎಂದರು.
ಚುನಾವಣೆಗಳಲ್ಲಿ ಇವಿಎಂಗಳಲ್ಲಿ ವ್ಯಾಪಕ ಹಸ್ತಕೇಪ ನಡೆದಿರುವುದು ಮಧ್ಯಪ್ರದೇಶದಲ್ಲಿ ಏರ್ಪಡಿಸಲಾಗಿದ್ದ ಇವಿಎಂಗಳ ಪ್ರಾತ್ಯಕ್ಷಿಕೆಯಲ್ಲಿ ಬಯಲಾಗಿದೆ ಎಂದು ಅವರು ಆರೋಪಿಸಿದರು.