ಐಆರ್‌ಡಿಎ ಸಭೆ ವಿಫಲ: ಮುಂದುವರೆದ ಲಾರಿ ಮುಷ್ಕರ
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ

ಬೆಂಗಳೂರು, ಎ.3: ಕೇಂದ್ರ ಸರಕಾರವು ವಾಣಿಜ್ಯ ವಾಹನಗಳ ವಿಮೆ ಕಂತಿನ ದರ ಏರಿಕೆಯನ್ನು ಹಿಂಪಡೆಯುವವರೆಗೆ ಮುಷ್ಕರವನ್ನು ಅಂತ್ಯಗೊಳಿಸದಿರಲು ದಕ್ಷಿಣ ರಾಜ್ಯಗಳ ವಾಣಿಜ್ಯ ವಾಹನಗಳ ಮಾಲಕರ ಸಂಘವು ನಿರ್ಧರಿಸಿದೆ.
ಕಳೆದ ನಾಲ್ಕು ದಿನಗಳಿಂದ ಲಾರಿಗಳು ಸೇರಿದಂತೆ ಸರಕು ಸಾಗಣೆ ಮಾಡುವ ಎಲ್ಲ ವಾಹನಗಳು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಆಹಾರ, ತರಕಾರಿ, ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇಂದಿನಿಂದ ಟೂರಿಸ್ಟ್, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್, ಅಡುಗೆ ಅನಿಲ, ಪೆಟ್ರೋಲ್ ಟ್ಯಾಂಕರ್‌ಗಳು ಕೈ ಜೋಡಿಸಿರುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.
ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಪಾಂಡಿಚೇರಿ, ತೆಲಂಗಾಣ ರಾಜ್ಯಗಳ ವಾಣಿಜ್ಯ ವಾಹನಗಳು ಮುಷ್ಕರಕ್ಕೆ ಕೈಜೋಡಿಸಿರುವ ಹಿನ್ನೆಲೆಯಲ್ಲಿ ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರ(ಐಆರ್‌ಡಿಎ)ವು ದಕ್ಷಿಣ ರಾಜ್ಯಗಳ ವಾಣಿಜ್ಯ ವಾಹನ ಮಾಲಕರ ಸಂಘದ ಪದಾಧಿಕಾರಿಗಳೊಂದಿಗೆ ಸೋಮವಾರ ಮಧ್ಯಾಹ್ನ ಹೈದರಾಬಾದ್‌ನಲ್ಲಿ ಸಭೆ ನಡೆಸಿತು.
ಆದರೆ, ವಿಮೆ ಕಂತಿನ ದರ ಇಳಿಕೆ ಮಾಡುವ ಸಂಬಂಧ ಯಾವುದೆ ಸ್ಪಷ್ಟವಾದ ತೀರ್ಮಾನ ಕೈಗೊಳ್ಳಲು ಸಭೆ ವಿಫಲವಾದ ಹಿನ್ನೆಲೆಯಲ್ಲಿ, ತಮ್ಮ ಪಟ್ಟು ಸಡಿಸಲು ನಿರಾಕರಿಸಿದ ವಾಹನ ಮಾಲಕರ ಸಂಘವು ಮುಷ್ಕರವನ್ನು ಮುಂದುವರೆಸಲು ನಿರ್ಧರಿಸಿದೆ.
ಲಾರಿ ಮುಷ್ಕರ ಮುಂದುವರೆಯುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಇದರಿಂದಾಗಿ, ಜನಸಾಮಾನ್ಯರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಸುಮಾರು 26 ಲಕ್ಷ ಸರಕು ಸಾಗಾಣಿಕೆ ವಾಹನಗಳು ರಸ್ತೆಗಿಳಿಯದೆ ಸ್ಥಗಿತಗೊಂಡಿವೆ.
ಕೇಂದ್ರ ಸರಕಾರವು ವಿಮಾ ಕಂತಿನ ದರವನ್ನು ಏಕಾಏಕಿ ಒಂದೂವರೆ ಪಟ್ಟು ಹೆಚ್ಚಳ ಮಾಡಿರುವುದರಿಂದ ಲಾರಿ ಮಾಲಕರಿಗೆ ತೀವ್ರ ಅನ್ಯಾಯವಾಗುತ್ತಿದೆ. ಖಾಸಗಿ ವಿಮಾ ಕಂಪೆನಿಗಳ ಲಾಭಕ್ಕಾಗಿ ಲಾರಿ ಮಾಲಕರನ್ನು ಸುಲಿಗೆ ಮಾಡಲು ಈ ನೀತಿ ಅನುಸರಿಸಲಾಗುತ್ತಿದೆ. ಕೇಂದ್ರ ಸರಕಾರ ಕೂಡಲೆ ವಿಮೆ ಕಂತಿನ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಪ್ರಮುಖ ಬೇಡಿಕೆ ಇರಿಸಿದ್ದಾರೆ.
ದಕ್ಷಿಣ ರಾಜ್ಯಗಳ ವಾಣಿಜ್ಯ ವಾಹನಗಳ ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ಪ್ರತಿನಿತ್ಯ ಸುಮಾರು 5 ರಿಂದ 6 ಸಾವಿರ ಕೋಟಿ ರೂ.ಗಳಷ್ಟು ನಷ್ಟ ಸಂಭವಿಸುತ್ತಿದೆ ಎಂದು ದಕ್ಷಿಣ ರಾಜ್ಯಗಳ ವಾಹನ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್.ಷಣ್ಮುಗಪ್ಪ ತಿಳಿಸಿದ್ದಾರೆ.
ಟೋಲ್ ಸಂಗ್ರಹ: ರಾಜ್ಯ ಸರಕಾರವು ರಾಜ್ಯದ 19 ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸುವ ನಿರ್ಧಾರವನ್ನು ತಕ್ಷಣವೆ ಹಿಂಪಡೆಯಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಂಘವು ಮನವಿ ಮಾಡಿದೆ.
ವಿಮೆ ನಿಯಂತ್ರಣ ಪ್ರಾಧಿಕಾರದೊಂದಿಗೆ ಹೈದರಾಬಾದ್‌ನಲ್ಲಿ ನಡೆದ ಮಾತುಕತೆಯು ವಿಫಲವಾಗಿರುವುದರಿಂದ ಲಾರಿ ಮಾಲಕರ ಸಂಘದ ಮುಷ್ಕರವು ಮುಂದುವರೆಯಲಿದೆ.
-ನಾರಾಯಣಪ್ಪ, ಪ್ರ.ಕಾರ್ಯದರ್ಶಿ, ಲಾರಿ ಮಾಲಕರ ಸಂಘ







