ಇವಿಎಂಗಳನ್ನು ಉ.ಪ್ರದೇಶದಿಂದ ಭಿಂಡ್‌ಗೆ ಸ್ಥಳಾಂತರಿಸಿದ್ದೇಕೆ? : ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಪ್ರಶ್ನೆ

ಭೋಪಾಲ,ಎ.3: ಇತ್ತೀಚಿಗೆ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾಗಿದ್ದ ವಿದ್ಯುನ್ಮಾನ ಮತಯಂತ್ರಗಳನ್ನೇ ಉಪಚುನಾವಣೆ ನಡೆಯಲಿರುವ ಮಧ್ಯಪ್ರದೇಶದ ಭಿಂಡ್‌ಗೆ ಸ್ಥಳಾಂತರಿಸಲು ನಿರ್ಧರಿಸಿದ್ದೇಕೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಚುನಾವಣಾ ಆಯೋಗವನ್ನು ಪ್ರಶ್ನಿಸಿದೆ.
ಭಿಂಡ್ ವಿಧಾನಸಭಾ ಕ್ಷೇತ್ರದಲ್ಲಿ ಎ.9ರಂದು ಮತದಾನ ನಡೆಯಲಿದೆ.
ಭಿಂಡ್‌ನಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ರವಿವಾರ ಮತದಾನ ದೃಢೀಕರಣ ವ್ಯವಸ್ಥೆ(ವಿವಿಪಿಎಟಿ) ಅಳವಡಿಸಲಾಗಿದ್ದ ಇವಿಎಂಗಳ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಿದ್ದು,ಈ ವೇಳೆ ಯಾವುದೇ ಗುಂಡಿ ಒತ್ತಿದ್ದರೂ ಮತಗಳೆಲ್ಲ ಬಿಜೆಪಿಗೇ ಬಿದ್ದಿದ್ದವು ಎಂದು ವರದಿಯಾಗಿತ್ತು.
ಈ ಪ್ರಾತ್ಯಕ್ಷಿಕೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ಮತ್ತು ಆಪ್‌ನಂತಹ ರಾಜಕೀಯ ಪಕ್ಷಗಳು ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರಿಕೊಂಡಿದ್ದವು ಮತ್ತು ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಯನ್ನು ಮತಪತ್ರಗಳನ್ನು ಬಳಸಿ ನಡೆಸುವಂತೆ ಆಗ್ರಹಿಸಿದ್ದವು.
ಪ್ರಾತ್ಯಕ್ಷಿಕೆಯ ಸಂದರ್ಭ ಉಪಸ್ಥಿತರಿದ್ದ ಅಧಿಕಾರಿಗಳು ಈ ಯಂತ್ರಗಳನ್ನು ಉ.ಪ್ರದೇಶದ ಕಾನ್ಪುರದಿಂದ ತಂದಿದ್ದಾಗಿ ತಿಳಿಸಿದ್ದರು. ಪ್ರಾತ್ಯಕ್ಷಿಕೆಯ ವೇಳೆ ಇವಿಎಂನಿಂದ ಹೊರಬಿದ್ದಿದ್ದ ಮತದಾನ ದೃಢೀಕರಣ ರಸೀದಿಯು ಬಿಜೆಪಿಯ ಚಿಹ್ನೆಯೊಂದಿಗೆ ಸತ್ಯದೇವಿ ಪಚೌರಿ ಅವರ ಹೆಸರನ್ನು ಹೊಂದಿತ್ತು ಎನ್ನುವುದು ಅವರ ಪ್ರತಿಪಾದನೆಯಾಗಿದೆ. ಸತ್ಯದೇವಿ ಅವರು ಚುನಾವಣೆಯಲ್ಲಿ ಗೆದ್ದು ಆದಿತ್ಯನಾಥ ಸರಕಾರದಲ್ಲಿ ಸಚಿವೆಯಾಗಿದ್ದಾರೆ.
ಇಡೀ ಪ್ರಕರಣವೇ ಒಂದು ಒಳಸಂಚು ಆಗಿದೆ ಎಂದು ಇಂದಿಲ್ಲಿ ಆರೋಪಿಸಿದ ಕಾಂಗ್ರೆಸ್ ವಕ್ತಾರ ಕೆ.ಕೆ.ಮಿಶ್ರಾ ಅವರು, ಕಾನೂನಿನಂತೆ ಫಲಿತಾಂಶ ಪ್ರಕಟಗೊಂಡ 90 ದಿನಗಳವರೆಗೆ ಇವಿಎಂ ಅನ್ನು ಬಳಸುವಂತಿಲ್ಲ ಅಥವಾ ಸ್ಥಳಾಂತರಿಸುವಂತಿಲ್ಲ. ಆದರೆ ಇಲ್ಲಿ ಕಾನೂನನ್ನು ಉಲ್ಲಂಘಿಸಲಾಗಿದೆ. ಕಾನ್ಪುರದಿಂದ ಭಿಂಡ್‌ಗೆ ಈ ಯಂತ್ರಗಳನ್ನು ಸ್ಥಳಾಂತರಿಸಿದ್ದು ಏಕೆ ಎನ್ನುವುದು ಮುಖ್ಯಪ್ರಶ್ನೆಯಾಗಿದೆ ಎಂದರು.
ಮಧ್ಯಪ್ರದೇಶ ಮುಖ್ಯ ಚುನಾವಣಾಧಿಕಾರಿ ಸಲೀನಾ ಸಿಂಗ್ ಅವರ ಕ್ರಮ ಪಕ್ಷಪಾತದಿಂದ ಕೂಡಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿದೆ. ಭಿಂಡ್‌ನ ನೂತನ ಜಿಲ್ಲಾಧಿಕಾರಿಯಾಗಿ ಕಿರಣ್ ಗೋಪಾಲ್ ಅವರ ನೇಮಕವನ್ನೂ ಅದು ವಿರೋಧಿಸಿದೆ. ಪ್ರಾತ್ಯಕ್ಷಿಕೆಯ ವಿವಾದದ ಹಿನ್ನಲೆಯಲ್ಲಿ ಅವರ ಪೂರ್ವಾಧಿಕಾರಿಯನ್ನು ಚುನಾವಣಾ ಆಯೋಗವು ಎತ್ತಂಗಡಿ ಮಾಡಿದೆ.
ಗೋಪಾಲ ಅವರೇ ಹಗರಣವೊಂದರಲ್ಲಿ ಭಾಗಿಯಾಗಿದ್ದಾರೆ,ಹೀಗಿರುವಾಗ ಅವರಿಂದ ನಿಷ್ಪಕ್ಷಪಾತ ಧೋರಣೆಯನ್ನು ನಿರೀಕ್ಷಿಸುವುದು ಹೇಗೆ ಸಾಧ್ಯ ಎಂದು ಮಿಶ್ರಾ ಪ್ರಶ್ನಿಸಿದರು.
ಕಾಂಗ್ರೆಸ್‌ನ ಆರೋಪವನ್ನು ತಳ್ಳಿಹಾಕಿದ ಬಿಜೆಪಿ ವಕ್ತಾರ ಹಿತೇಶ ಉಪಾಧ್ಯಾಯ ಅವರು, ಚುನಾವಣಾ ಪ್ರಕ್ರಿಯೆಯ ರಾಜಕೀಕರಣದಿಂದ ಕಾಂಗ್ರೆಸ್ ದೂರವಿರಬೇಕು ಎಂದರು.







