ಅಕ್ರಮ ಮರಳುಗಾರಿಕೆ ವಿರುದ್ಧ ಯೋಜನಬದ್ಧ ಕ್ರಮ: ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್

ಉಡುಪಿ, ಎ.3: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯ ವಿರುದ್ಧ ಸೂಕ್ತ ಭದ್ರತೆಯೊಂದಿಗೆ ಯೋಜನಬದ್ಧವಾಗಿ ದಾಳಿ ನಡೆಸಿ ಕ್ರಮತೆಗೆದು ಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಿನ್ನೆ ರಾತ್ರಿ ನಡೆದ ಘಟನೆ ನಮಗೆ ಒಂದು ಪಾಠ. ಇದರಿಂದ ನಾವು ಎಚ್ಚೆತ್ತುಕೊಂಡಿದ್ದೇವೆಯೇ ಹೊರತು ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಅಕ್ರಮ ಮರಳುಗಾರಿಕೆ ದಂಧೆಯು ಸರಕಾರದ ಮುಂದಿರುವ ದೊಡ್ಡ ಸವಾಲು. ಇದರ ವಿರುದ್ಧ ಯೋಜನೆ ರೂಪಿಸಿ ಹೆಚ್ಚಿನ ಪೊಲೀಸ್ ಭದ್ರತೆಯೊಂದಿಗೆ ಕಾರ್ಯಾಚರಣೆ ನಡೆಸಲಾಗುವುದು ಎಂದರು.
ಅನಿರೀಕ್ಷಿತ ದಾಳಿಯ ವೇಳೆ ಪೊಲೀಸರಿಗೆ ಮಾಹಿತಿ ಕೊಡಬೇಕಾಗಿಲ್ಲ. ನಾವು ನಿನ್ನೆ ಮಾಡಿರುವುದು ಅನಿರೀಕ್ಷಿತ ದಾಳಿಯಾಗಿದೆ. ಅಕ್ರಮ ಮರಳುಗಾರಿಕೆ ವಿರುದ್ಧ ಕ್ರಮ ಜರಗಿಸಲು ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಕಾರ್ಯ ಪಡೆ ರಚಿಸಲಾಗಿದೆ. ಇದಕ್ಕೆ ದೂರು ಬಂದರೆ ಯಾವುದೇ ಅಧಿಕಾರಿ ಕೂಡ ದಾಳಿ ನಡೆಸಿ ಕ್ರಮ ತೆಗೆದುಕೊಳ್ಳಬಹುದು. ನಂತರ ಪೊಲೀಸರಿಗೆ ದೂರು ನೀಡ ಬಹುದು. ಮುಂದೆ ಎಲ್ಲ ಇಲಾಖೆಯ ಜೊತೆ ಸೇರಿ ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.







