ಆರೋಪಿಗಳ ವಿರುದ್ಧ ಕ್ರಮಕ್ಕೆ ಸೂಚನೆ: ಸಚಿವ ಪ್ರಮೋದ್

ಉಡುಪಿ, ಎ.3: ಅಕ್ರಮ ಮರಳುಗಾರಿಕೆ ವಿರುದ್ಧ ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್ ತೋರಿದ ಧೈರ್ಯ ಮೆಚ್ಚುವಂತದ್ದು. ಜಿಲ್ಲಾಧಿಕಾರಿಯವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಎಸ್ಪಿಯವರಿಗೆ ಸೂಚನೆ ನೀಡಿದ್ದೇನೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಗುಂಡ್ಲುಪೇಟೆ ಉಪಚುನಾವಣೆಯ ಪ್ರಚಾರದಲ್ಲಿರುವ ಸಚಿವರು ಈ ಕುರಿತು ಪ್ರತಿಕ್ರಿಯಿಸಿ, ಕೊಲೆಯತ್ನ ನಡೆದಿರುವ ವಿಚಾರವನ್ನು ಜಿಲ್ಲಾಧಿಕಾರಿ ಗಳು ನಿನ್ನೆ ರಾತ್ರಿಯೇ ದೂರವಾಣಿ ಮೂಲಕ ಮಾಹಿತಿ ನೀಡಿದರು. ಈ ಕುರಿತು ದೂರು ದಾಖಲಾಗಿರುವ ವಿಚಾರವನ್ನು ಎಸ್ಪಿಯವರು ತಿಳಿಸಿದರು.
ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್ ಅವರಿಬ್ಬರೇ ಯಾರಿಗೂ ಗೊತ್ತಾಗದಂತೆ ಭದ್ರತೆ ಇಲ್ಲದೆ ಮರಳುಗಾರಿಕೆ ಪರಿಶೀಲನೆಗೆ ಹೋಗಿದ್ದು, ಅಲ್ಲಿ ಮನೆಯೊಳಗೆ ಇದ್ದ ಭಾಸ್ಕರ ಮೊಗವೀರರನ್ನು ಡಿಸಿ ಗನ್‌ಮ್ಯಾನ್ ಮನೆ ಹೊರಗೆ ಎಳೆದು ತರುವಾಗ ಅವರ ಬೆರಳಿಗೆ ಪೆಟ್ಟಾಗಿದೆ. ಇದರಿಂದ ಮನೆಯಲ್ಲಿದ್ದ ಮಹಿಳೆಯರು ಹಾಗೂ ಜಿಲ್ಲಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ ಎಂದರು.
ಸಿಆರ್‌ಝಡ್ ಮತ್ತು ನಾನ್ ಸಿಆರ್‌ಝಡ್ ಪ್ರದೇಶದಲ್ಲಿ ಮರಳುಗಾರಿಕೆ ಸಕ್ರಮವಾಗಿ ನಡೆಯುತ್ತಿಲ್ಲ. ಆದುದರಿಂದ ಕೆಲವೆಡೆ ಅಕ್ರಮವಾಗಿ ಇದು ನಡೆಸಲಾಗುತ್ತಿದೆ. ನಮ್ಮ ಜಿಲ್ಲೆಯ ಮರಳು ಹೊರಜಿಲ್ಲೆಗಳಿಗೆ ಹೋಗದಂತೆ ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್ ಅವರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಅದರಂತೆ ಚೆಕ್‌ಪೋಸ್ಟ್‌ಗಳನ್ನೂ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.
ಕೆಳಹಂತದ ಅಧಿಕಾರಿಗಳ ಮೇಲೆ ವಿಶ್ವಾಸವಿಲ್ಲದ ಕಾರಣ ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್ ಸ್ವತಃ ಕಾರ್ಯಾಚರಣೆ ನಡೆಸಿದರು. ತಪ್ಪಿತಸ್ಥ ಅಧಿಕಾರಿ ಗಳ ಮೇಲೂ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಜಿಲ್ಲಾಧಿಕಾರಿ, ಸಹಾ ಯಕ ಕಮಿಷರನ್ ಅವರ ಧೈರ್ಯ, ಪ್ರಾಮಾಣಿಕತೆ ಶ್ಲಾಘನೀಯವಾದರೂ ಇಂತಹ ಸಂದರ್ಭ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡು ಮುಂದೆ ಹೋಗ ಬೇಕು ಎಂದು ಅವರು ತಿಳಿಸಿದರು.







