ಜಾಫರ್ ಷರೀಫ್ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ: ದೇವೇಗೌಡ

ಬೆಂಗಳೂರು, ಎ.3: ಜಾಫರ್ ಷರೀಫ್ ನನಗಿಂತ ಹಿರಿಯರು, ಅವರ ಮನಸ್ಸಿನಲ್ಲಿ ಏನಿದೆಯೊ ನನಗೆ ಗೊತ್ತಿಲ್ಲ. ಆ ಬಗ್ಗೆ ಕಮೆಂಟ್ ಮಾಡಲ್ಲ, ಯಾರ ಬಗ್ಗೆ ಟೀಕೆಯನ್ನೂ ಮಾಡುವುದಿಲ್ಲ, ಸೌಹಾರ್ದತೆ ಕಾಪಾಡಬೇಕೆಂಬ ಉದ್ದೇಶದಿಂದ ಆ ರೀತಿ ಹೇಳಿರಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಪ್ರತಿಕ್ರಿಯಿಸಿದರು.
ಇಂದು ಪಕ್ಷದ ಕಚೇರಿ ಜೆ.ಪಿ. ಭವನದಲ್ಲಿ ಹಲವು ಕ್ರೈಸ್ತ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ, ಜಾಫರ್ ಷರೀಫ್ ನನಗಿಂತ ಹಿರಿಯರು, ಅವರ ಮನಸ್ಸಿನಲ್ಲಿ ಏನಿದೆಯೊ ನನಗೆ ಗೊತ್ತಿಲ್ಲ, ಸೌಹಾರ್ದತೆ ಕಾಪಾಡಬೇಕೆಂಬ ಉದ್ದೇಶದಿಂದ ಆ ರೀತಿ ಹೇಳಿರಬೇಕು ಎಂದು ಮೋಹನ್ ಭಾಗವತ್ ಅವರನ್ನು ರಾಷ್ಟ್ರಪತಿ ಮಾಡಬೇಕೆಂಬ ಜಾಫರ್ ಷರೀಫ್ ಪತ್ರದ ಕುರಿತು ಪ್ರತಿಕ್ರಿಯೆ ನೀಡಿದರು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುವಂತೆ ದೇವೆಗೌಡರ ಜೊತೆ ಮಾತನಾಡುತ್ತೇನೆಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿದ ದೇವೆಗೌಡ, ನಮ್ಮ ಅಭ್ಯರ್ಥಿಯನ್ನು ಕರೆದುಕೊಂಡು ಹೋಗಿ ಕಾಂಗ್ರೆಸ್‌ನವರು ಅಭ್ಯರ್ಥಿ ಮಾಡಿದ್ದಾರೆ. ನಾವು ಸ್ಪರ್ಧೆ ಮಾಡಿಲ್ಲ. ಹೀಗಾಗಿ ಉಪ ಚುನಾವಣೆಯಲ್ಲಿ ತಟಸ್ಥರಾಗಿರಬೇಕೆಂದು ನಿರ್ಣಯ ಮಾಡಿದ್ದೇವೆ. ರಾಜ್ಯ ಘಟಕದ ಅಧ್ಯಕ್ಷರು ಈ ಬಗ್ಗೆ ಹೇಳಿದ್ದಾರೆ. ಅವರ ನಿರ್ಣಯವನ್ನು ಬದಲಾಯಿಸುವ ಇಚ್ಛೆ ನನಗಿಲ್ಲ. ನಾನು ಇನ್ನೊಮ್ಮೆ ರಾಜ್ಯ ಅಧ್ಯಕ್ಷರೊಂದಿಗೆ ಮಾತನಾಡುತ್ತೇನೆ ಎಂದರು.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೆಗೌಡ ಅವರ ಸಮ್ಮುಖದಲ್ಲಿ ಹಲವು ಕ್ರೈಸ್ತ ಮುಖಂಡರು ಪಕ್ಷಕ್ಕೆ ಸೇರ್ಪಡೆಯಾದರು. ಹಲವು ಮುಖಂಡರು ಉಪಸ್ಥಿತರಿದ್ದರು.







