ಕೇಂದ್ರ ಸರಕಾರ ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡಿದೆ: ಕೆ.ವರದರಾಜನ್
ರಾಜ್ಯಮಟ್ಟದ ಉದ್ಯೋಗ ಖಾತ್ರಿ ಸಮಾವೇಶ

ಬೆಂಗಳೂರು, ಎ. 3: ದೇಶದಲ್ಲಿ ಭೀಕರ ಬರಗಾಲವಿದ್ದರೂ ನರೇಗಾ ಯೋಜನೆಯ ಅನುದಾನವನ್ನು ಕೇಂದ್ರ ಸರಕಾರ ಕಡಿತಗೊಳಿಸುವ ಮೂಲಕ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ ಉಪಾಧ್ಯಕ್ಷ ಕೆ.ವರದರಾಜನ್‌ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದ ಕೆ.ಎಚ್.ಪಾಟೀಲ್ ಸಭಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್, ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಪ್ರಾಂತ ಕೃಷಿ ಕೂಲಿಕಾರರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಉದ್ಯೋಗ ಖಾತ್ರಿ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದಲ್ಲಿ 140 ವರ್ಷಗಳ ಬಳಿಕ ಭೀಕರ ಬರಗಾಲ ಆವರಿಸಿದೆ. ನರೇಗಾ ಯೋಜನೆಯಡಿ ಬರಗಾಲ ಪ್ರದೇಶದಲ್ಲಿ 150 ಮಾನವ ಸೃಜನ ದಿನ ಹಾಗೂ ಬರ ಇಲ್ಲದ ಪ್ರದೇಶದಲ್ಲಿ 100 ಮಾನವ ಸೃಜನ ದಿನ ಉದ್ಯೋಗ ನೀಡಬೇಕು ಎಂಬ ನಿಯಮವಿದೆ. ಆದರೆ ಪ್ರತಿವರ್ಷ ನೀಡುತ್ತಿದ್ದ ಅನುದಾನದ ಪ್ರಮಾಣದಲ್ಲಿ ಅರ್ಧದಷ್ಟು ಕಡಿತಗೊಳಿಸಿರುವುದರಿಂದ ಈ ವರ್ಷದಲ್ಲಿ ಕನಿಷ್ಠ 60 ಮಾನವ ಸೃಜನ ದಿನಗಳು ಕೂಲಿ ಕಾರ್ಮಿಕರಿಗೆ ಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಮಿಳುನಾಡು, ಬಿಹಾರ, ಉತ್ತರ ಪ್ರದೇಶ ಸೇರಿದಂತೆ ನಾನಾ ರಾಜ್ಯಗಳಲ್ಲಿ ನರೇಗಾ ಯೋಜನೆಯ ಅನುದಾನ ದುರುಪಯೋಗವಾಗುತ್ತಿದೆ. ಯಂತ್ರಗಳಿಂದ ಕೆಲಸ ಮಾಡಿಸಿ, ಜನರು ಮಾಡಿದ್ದಾರೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಯೋಜನೆಯ ಹಣ ದೋಚುತ್ತಿದ್ದಾರೆ ಎಂದು ದೂರಿದರು.
ದೇಶದ ಗ್ರಾಮೀಣ ಭಾಗದ ಶೇ.60ರಷ್ಟು ಜನರಲ್ಲಿ ಭೂಮಿ ಇಲ್ಲ. ಕೃಷಿ ಭೂಮಿ ಇರುವವರಲ್ಲಿ ಶೇ. 42ರಷ್ಟು ರೈತರು ಪರ್ಯಾಯ ಉದ್ಯೋಗದ ಕಡೆ ಮುಖ ಮಾಡಿದ್ದಾರೆ. ನೀರಾವರಿ ಸೌಲಭ್ಯವಿರುವ ಪ್ರದೇಶಗಳಲ್ಲಿ ರೈತರ ಆತ್ಮಹತ್ಯೆಗಳ ಪ್ರಮಾಣವೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಪರಿಣಾಮ ಭವಿಷ್ಯದಲ್ಲಿ ಕೃಷಿಯ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಎಚ್ಚರಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಅಧ್ಯಕ್ಷ ವಿ.ಪ್ರಸಾದ್ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನರೇಗಾ ಯೋಜನೆ ಶೇ. 92ರಷ್ಟು ಪ್ರಗತಿ ಸಾಧಿಸಲಾಗಿದೆ. ಒಟ್ಟು ಕೇಂದ್ರ ಸರಕಾರದಿಂದ 41 ಕೋಟಿ ರೂ. ಅನುದಾನ ಬರಬೇಕಿತ್ತು. ಆದರೆ 38 ಕೋಟಿ ರೂ. ಮಾತ್ರ ನೀಡಿದೆ. ಇದರಿಂದ ಯೋಜನೆಯ ನಿರೀಕ್ಷಿತ ಮಟ್ಟ ತಲುಪಲು ಸಾಧ್ಯವಾಗಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಪಿ.ಎನ್.ಅನಂತಕುಮಾರಿ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ನಿತ್ಯಾನಂದ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಯು.ಬಸವರಾಜ, ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಗೀತಾ ಸೇರಿದಂತೆ ಇತರರು ಇದ್ದರು.







