ಆಕ್ಷೇಪಣೆ ಸಲ್ಲಿಸಲು ಡಿವೈಎಸ್ಪಿ ಗಣಪತಿ ಕುಟುಂಬಕ್ಕೆ ಅವಕಾಶ ಕಲ್ಪಿಸಿದ ನ್ಯಾಯಾಲಯ

ಮಡಿಕೇರಿ ಏ.3: ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ವರದಿಗೆ ಆಕ್ಷೇಪಣೆ ಸಲ್ಲಿಕೆಗೆ ಗಣಪತಿ ಅವರ ತಂದೆ, ತಾಯಿ, ಸಹೋದರ ಮತ್ತು ಸಹೋದರಿಗೆ ನಗರದ ಪ್ರಿನ್ಸಿಪಲ್ ಸಿವಿಲ್ ಜಡ್ಜ್ (ಜೂನಿಯರ್ ಡಿವಿಷನ್) ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಅವಕಾಶವನ್ನು ಒದಗಿಸುವ ಮೂಲಕ ಪ್ರಕರಣಕ್ಕೆ ಮತ್ತೊಂದು ತಿರುವು ದೊರೆತ್ತಿದೆ.
2016 ಜು.7 ರಂದು ನಡೆದ ಡಿವೈಎಸ್ಪಿ ಎಂ.ಕೆ. ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ತಂದೆ ಕುಶಾಲಪ್ಪ, ತಾಯಿ ಪೊನ್ನಮ್ಮ, ಸಹೋದರ ಮಾಚಯ್ಯ ಮತ್ತು ಸಹೋದರಿ ಸಬಿತಾ ಅವರನ್ನು ಪಿರ್ಯಾದಿದಾರರನ್ನಾಗಿ ಪರಿಗಣಿಸಬೇಕೆಂದು ಅಗತ್ಯ ದಾಖಲೆಗಳೊಂದಿಗೆ ಇದೇ ಮಾರ್ಚ್ 7 ರಂದು ನ್ಯಾಯಾಲಯದಲ್ಲಿ ವಾದ ಮಂಡನೆಯಾಗಿತ್ತು.
ಈ ಸಂಬಂಧ ನ್ಯಾಯಾಧೀಶರಾದ ಅನ್ನಪೂರ್ಣೇಶ್ವರಿ ಅವರು ಸೋಮವಾರ ತಮ್ಮ ಆದೇಶದಲ್ಲಿ, ಸಿಐಡಿ ವರದಿಗೆ ಸಂಬಂಧಿಸಿದಂತೆ ಡಿವೈಎಸ್‌ಪಿ ಗಣಪತಿ ಅವರ ತಂದೆ, ತಾಯಿ, ಸಹೋದರ ಮತ್ತು ಸಹೋದರಿಗೆ ಆಕ್ಷೇಪಣೆ ಸಲ್ಲಿಸುವುದಕ್ಕೆ ಏಪ್ರಿಲ್ 10ರ ಕಾಲಾವಕಾಶವನ್ನು ನೀಡಿದ್ದಾರೆ.
ಡಿವೈಎಸ್ಪಿ ಗಣಪತಿ ಅವರು ಸಚಿವ ಕೆ.ಜೆ.ಜಾರ್ಜ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಹೇಳಿಕೆಯನ್ನು ನೀಡಿ ಮಡಿಕೇರಿಯ ಲಾಡ್ಜ್‌ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ಪ್ರಕರಣ ದಾಖಲಾಗುವುದರೊಂದಿಗೆ, ಸಿಐಡಿ ತನಿಖೆಯೂ ನಡೆದಿತ್ತು.
ತನಿಖಖೆ ನಡೆಸಿದ ಸಿಐಡಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಈ ಸಂದರ್ಭ ಡಿವೈಎಸ್ಪಿ ಗಣಪತಿ ಅವರ ಪುತ್ರ ನೇಹಾಲ್ ಗಣಪತಿ ಅವರು, ತಮ್ಮ ಶಿಕ್ಷಣಕ್ಕೆ ತೊಂದರೆಯಾಗುವ ಕಾರಣವನ್ನು ನೀಡಿ ಪ್ರಕರಣದಿಂದ ಹಿಂದೆ ಸರಿದಿದ್ದರು.
ಆದರೆ ಪ್ರಕರಣದಲ್ಲಿ ಮುಂದುವರಿಯಲು ಅವಕಾಶ ನೀಡುವಂತೆ ಡಿವೈಎಸ್ಪಿ ಗಣಪತಿ ಅವರ ತಂದೆ, ತಾಯಿ, ಸಹೋದರ ಮತ್ತು ಸಹೋದರಿ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಇದೀಗ ಇವರಿಗೆ ಸಿಐಡಿ ವರದಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಪ್ರಕರಣಕ್ಕೆ ಮತ್ತೆ ಹೊಸ ತಿರುವು ಸಿಕ್ಕಂತ್ತಾಗಿದೆ.
ನ್ಯಾಯಾಲಯ ಆದೇಶ ನೀಡುವ ಸಂದರ್ಭ ಡಿವೈಎಸ್ಪಿ ಗಣಪತಿ ಅವರ ತಂದೆ ಕುಶಾಲಪ್ಪ, ಸಹೋದರ ಮಾಚಯ್ಯ ಮತ್ತು ಸಹೋದರಿ ಸಬಿತಾ ಅವರುಗಳು ಹಾಜರಿದ್ದರು.
ನ್ಯಾಯದ ವಿಶ್ವಾಸ:
ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಭಾಗಿಗಳಾಗಲು ನ್ಯಾಯಾಲಯ ಅವಕಾಶ ನೀಡಿರುವುದು ನಮಗೆ ದೊರಕಿರುವ ಆರಂಭಿಕ ಗೆಲುವಾಗಿದ್ದು, ನ್ಯಾಯ ದೊರಕುವ ವಿಶ್ವಾಸವಿದೆ ಎಂದು ಗಣಪತಿ ಅವರ ಸಹೋದರ ಮಾಚಯ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತರಾತುರಿಯಲ್ಲಿ ತನಿಖೆ ನಡೆಸಿ ವರದಿಯನ್ನು ಸಲ್ಲಿಸಿದೆ. ಇದೀಗ ಈ ವರದಿಗೆ ಆಕ್ಷೇಪಣೆೆ ಸಲ್ಲಿಸಲು ತಮಗೆ ಅವಕಾಶ ದೊರಕಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡುವುದಾಗಿ ತಿಳಿಸಿದರು.







