ಉಡುಪಿ ಜಿಲ್ಲಾಧಿಕಾರಿ ಕೊಲೆಯತ್ನ ವಿರೋಧಿಸಿ ಧರಣಿ, ಮನವಿ

ಉಡುಪಿ, ಎ.3: ಅಕ್ರಮ ಮರಳುಗಾರಿಕೆ ವಿರುದ್ಧ ಕ್ರಮ ಜರಗಿಸಲು ಮುಂದಾದ ಜಿಲ್ಲಾಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ, ಕರ್ನಾಟಕ ಕಾರ್ಮಿಕರ ವೇದಿಕೆ, ಸರ್ವ ಸಂಘಟನೆಗಳ ಮರಳಿಗಾಗಿ ಹೋರಾಟ ಸಮಿತಿ, ಲಾರಿ ಮಾಲಕರ ಸಂಘ ಇಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ಅವರಿಗೆ ಸಲ್ಲಿಸಿತು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆ ಮುಖಂಡರಾದ ಅನ್ಸಾರ್ ಅಹ್ಮದ್, ರವಿ ಶೆಟ್ಟಿ, ಚಂದ್ರ ಪೂಜಾರಿ, ಪ್ರವೀಣ್ ಸುವರ್ಣ, ಮಧುಕರ ಪೂಜಾರಿ, ರಾಘವೇಂದ್ರ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಪ್ರತಿಭಟನೆ:
ಜಿಲ್ಲಾಧಿಕಾರಿ ಮೇಲಿನ ಹಲ್ಲೆ ಖಂಡಿಸಿ ಹಾಗೂ ಮರಳು ಮಾಫಿಯಾ ವಿರುದ್ಧ ಕ್ರಮ ಜರಗಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಬಿಜೆಪಿ ಇಂದು ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಧರಣಿ ನಡೆಸಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ರಘುಪತಿ ಭಟ್, ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮುಖಂಡರಾದ ಕಟಪಾಡಿ ಶಂಕರ ಪೂಜಾರಿ, ಕುಯಿಲಾಡಿ ಸುರೇಶ್ ನಾಯಕ್, ಸಲೀಂ ಅಂಬಾಗಿಲು, ಗೀತಾಂಜಲಿ ಸುವರ್ಣ, ರಜನಿ ಪ್ರದೀಪ್ ರಾವ್, ನಯನ ಗಣೇಶ್, ಉಪೇಂದ್ರ ನಾಯಕ್, ಸುಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸರಕಾರಿ ನೌಕರರ ಸಂಘ:
ಸರಕಾರಿ ನೌಕರರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಉಡುಪಿ ಜಿಲ್ಲಾ ಘಟಕ ಇಂದು ಜಿಲ್ಲಾ ಎಸ್ಪಿ ಕೆ.ಟಿ.ಬಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿತು.
ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಜರಗಿಸದಿದ್ದರೆ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿ ಗಾರ್ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಅರುಣ್ ಮಾರುತಿ, ಕೋಶಾಧಿಕಾರಿ ಬಿ.ಚಂದ್ರಶೇಖರ್ ಮೊದಲಾದವರು ಇದ್ದರು.







