ಮುಂದುವರಿದ ಬಿಜೆಪಿ ಬಣ ರಾಜಕಾರಣ

ಶಿವಮೊಗ್ಗ, ಎ.3: ರಾಜ್ಯ ಬಿಜೆಪಿಯ ಶಕ್ತಿ ಕೇಂದ್ರವೆಂದೇ ಬಿಂಬಿತವಾಗಿರುವ ಶಿವಮೊಗ್ಗ ಕಮಲ ಪಾಳಯದಲ್ಲಿ ಮನೆ ಮಾಡಿರುವ ಗೊಂದಲಕ್ಕೆ ಸದ್ಯಕ್ಕೆ ಪೂರ್ಣವಿರಾಮ ಬೀಳುವ ಲಕ್ಷಣಗಳಿಲ್ಲ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪಹಾಗೂ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪಬಣಗಳ ನಡುವಿನ ಶೀತಲಸಮರ ಮುಂದುವರಿದಿದ್ದು, ಬಣ ರಾಜಕಾರಣ ತೀವ್ರಗೊಂಡಿದೆ.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅಸ್ತಿತ್ವಕ್ಕೆ ಬಂದ ನಂತರ ಬಿಎಸ್‌ವೈ ಹಾಗೂ ಕೆಎಸ್‌ಇ ಪರಸ್ಪರ ಉತ್ತರ-ದಕ್ಷಿಣ ಧ್ರುವಗಳಾಗಿ ಮಾರ್ಪಟ್ಟಿದ್ದರು. ಬಹಿರಂಗವಾಗಿ ಇಬ್ಬರೂ ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದರು. ಪಕ್ಷದ ಮುಖಂಡರು ಕೂಡ ಬ್ರಿಗೇಡ್ ಪರ ಹಾಗೂ ವಿರುದ್ಧ ಹೇಳಿಕೆ-ಪ್ರತಿ ಹೇಳಿಕೆ ನೀಡಲಾರಂಭಿಸಿದ್ದರು.
ಬಿಎಸ್‌ವೈ-ಕೆಎಸ್‌ಇ ನಡುವಿನ ವೈಮನಸ್ಸು ರಾಜ್ಯ ಬಿಜೆಪಿಯಲ್ಲಿ ಗೊಂದಲ ಮೂಡಿ ಭಾರೀ ಭಿನ್ನಮತ ಸೃಷ್ಟಿಸಿತ್ತು. ಶಿವಮೊಗ್ಗ ಬಿಜೆಪಿಯಲ್ಲಿ ಬಣ ರಾಜಕಾರಣ ತಾರಕಕ್ಕೇರಿತ್ತು. ಎರಡೂ ಬಣಗಳ ಮುಖಂಡರು ಬಹಿರಂಗವಾಗಿ ಟೀಕಾ ಪ್ರಹಾರ ನಡೆಸಿಕೊಂಡಿದ್ದರೆ, ಕಾರ್ಯಕರ್ತರು ರಸ್ತೆಯಲ್ಲಿಯೇ ಹೊಡೆದಾಡಿಕೊಂಡಿದ್ದರು. ಇದೆಲ್ಲದರ ನಡುವೆ ಪಕ್ಷದ ರಾಷ್ಟ್ರೀಯ ವರಿಷ್ಠರು ಮಧ್ಯೆ ಪ್ರವೇಶಿಸಿ, ಕಲಹಕ್ಕೆ ಇತಿಶ್ರೀ ಹಾಡಿದ್ದರು. ಬಿಎಸ್‌ವೈ ಹಾಗೂ ಕೆಎಸ್‌ಇ ಕೂಡ ತಮ್ಮಲ್ಲಿದ್ದ ಸಣ್ಣಪುಟ್ಟ ಗೊಂದಲಗಳು ತಿಳಿಯಾಗಿವೆ. ಒಟ್ಟಾಗಿ ಪಕ್ಷ ಸಂಘಟಿಸುವ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದರು.
ಜೊತೆಜೊತೆಯಾಗಿ ಕಾಣಿಸಿಕೊಳ್ಳಲಾರಂಭಿಸಿದ್ದರು. ಬದಲಾಗಿಲ್ಲ: ತವರೂರಿನಲ್ಲಿ ನಡೆಯುತ್ತಿರುವ ಪಕ್ಷದ ವಿದ್ಯಮಾನಗಳನ್ನು ಗಮನಿಸಿದರೆ ಬಿಎಸ್‌ವೈ ಬಣದಲ್ಲಿ ಗುರುತಿಸಿಕೊಂಡಿರುವ ಕೆಲ ಮುಖಂಡರು ಪರೋಕ್ಷವಾಗಿ ಕೆ.ಎಸ್.ಈಶ್ವರಪ್ಪವಿರುದ್ಧ ಸಮರ ಮುಂದುವರಿಸಿರುವುದು ಸ್ಪಷ್ಟವಾಗುತ್ತಿದೆ. ಇತ್ತೀಚೆಗೆ ಯುಗಾದಿಗೆ ಶುಭ ಹಾರೈಸಲು ಶಿವಮೊಗ್ಗ ನಗರದ ವಿವಿಧೆಡೆ ಹಾಕಿದ್ದ ಬಿಜೆಪಿಯ ಫ್ಲೆಕ್ಸ್‌ಗಳಲ್ಲಿ ಕೆ.ಎಸ್. ಈಶ್ವರಪ್ಪರ ಭಾವಚಿತ್ರ ನಾಪತ್ತೆಯಾಗಿತ್ತು. ಉದ್ದೇಶ ಪೂರ್ವಕವಾಗಿಯೇ ಭಾವಚಿತ್ರ ಹಾಕಿಲ್ಲವೆಂದು ಆರೋಪಿಸಿ ಅವರ ಅಭಿಮಾನಿಗಳು ಫ್ಲೆಕ್ಸ್‌ಗಳಲ್ಲಿ ಕೆಎಸ್‌ಇ ಭಾವಚಿತ್ರ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಮರುದಿನವೇ ಕೆಲ ಫ್ಲೆಕ್ಸ್‌ಗಳಲ್ಲಿದ್ದ ನಾಯಕರ ಭಾವಚಿತ್ರ ವಿರೂಪಗೊಳಿಸುವ ಪ್ರಯತ್ನ ಕೂಡ ನಡೆದಿತ್ತು.
ಇದು ಪಕ್ಷದ ವಲಯದಲ್ಲಿ ವ್ಯಾಪಕ ಚರ್ಚೆಗೀಡು ಮಾಡಿತ್ತು. ಸೋಮವಾರ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಮರಳಿನ ವಿಷಯಕ್ಕೆ ಸಂಬಂಧಿಸಿದ ಪ್ರತಿಭಟನೆಯ ಫ್ಲ್ಲೆಕ್ಸ್‌ಗಳಲ್ಲಿ ಬಿಎಸ್‌ವೈ ಬಣದಲ್ಲಿ ಗುರುತಿಸಿಕೊಂಡಿರುವ ಮುಖಂಡರ ಭಾವಚಿತ್ರಗಳೇ ರಾರಾಜಿಸುತ್ತಿದ್ದವು. ಕೆಎಸ್‌ಇ ಭಾವಚಿತ್ರ ಕಣ್ಮರೆಯಾಗಿತ್ತು. ಹಾಗೆಯೇ ಶಿವಮೊಗ್ಗ ನಗರದಲ್ಲಿ ಇದ್ದರೂ ಈ ಪ್ರತಿಭಟನೆಯಲ್ಲಿ ಕೆಎಸ್‌ಇ ಭಾಗವಹಿಸಿರಲಿಲ್ಲ. ಕೆಎಸ್‌ಇ ಬಣದಲ್ಲಿ ಗುರುತಿಸಿಕೊಂಡಿರುವ ಮುಕ್ಕಾಲುಪಾಲು ಮುಖಂಡರು ಗೈರು ಹಾಜರಾಗಿರುವುದು ಎದ್ದು ಕಾಣುತ್ತಿದ್ದರೆ, ಬಿಎಸ್‌ವೈ ಬಣದಲ್ಲಿ ಗುರುತಿಸಿಕೊಂಡಿರುವ ಮುಖಂಡರು ದೊಡ್ಡ ಸಂಖ್ಯೆಯಲ್ಲಿದ್ದುದು ಕಂಡುಬಂದಿತು.
ವಿಧಾನಸಭೆ ಚುನಾವಣೆಯತ್ತ ಕಣ್ಣು!
ಕೆ.ಎಸ್. ಈಶ್ವರಪ್ಪ ಅವರು ಮುಂಬರುವ ವಿಧಾನಸಭೆ ಚುನಾವಣೆಗೆ ಸ್ವಕ್ಷೇತ್ರ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಕೆಎಸ್‌ಇ ಅವರು ಕ್ಷೇತ್ರದಾದ್ಯಂತ ಬಿರುಸಿನ ಸುತ್ತಾಟ ನಡೆಸುವ ಮೂಲಕ ಚುನಾವಣೆಗೆ ಸಕಲ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಲಾರಂಭಿಸಿದ್ದಾರೆ. ಇನ್ನೊಂದೆಡೆ ಸ್ಥಳೀಯ ಬಿಜೆಪಿಯ ಕೆಲ ನಾಯಕರು ತಾವು ಕೂಡ ಸ್ಪರ್ಧಾಕಾಂಕ್ಷಿಗಳು ಎಂದು ಹೇಳುತ್ತಿದ್ದಾರೆ. ಇದು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡಿದೆ.
ಸಾಕಾಗಿ ಹೋಗಿದೆ...: ಕಾರ್ಯಕರ್ತರ ಅಳಲು
‘ಯಡಿಯೂರಪ್ಪಹಾಗೂ ಈಶ್ವರಪ್ಪರ ನಡುವೆ ಏನೇ ವೈಮನಸ್ಸಿದ್ದರೂ ಅದನ್ನು ಅವರಿಬ್ಬರು ಬಗೆಹರಿಸಿಕೊಳ್ಳುತ್ತಾರೆ. ಆದರೆ ಇದನ್ನೇ ಮುಂದಿಟ್ಟುಕೊಂಡು ಪಕ್ಷದಲ್ಲಿ ಕೆಲವರು ರಾಜಕಾರಣ ಮಾಡಲು ಮುಂದಾಗುತ್ತಿದ್ದು, ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುತ್ತಿದೆ. ಹಾಗೆಯೇ ನಿಷ್ಠಾವಂತ ಕಾರ್ಯಕರ್ತರಲ್ಲಿಯೂ ಬೇಸರ ಉಂಟು ಮಾಡಿದೆ. ಪಕ್ಷದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳಿಂದ ಅದೆಷ್ಟೋ ಕಾರ್ಯಕರ್ತರು ಬೇಸರಗೊಂಡಿದ್ದಾರೆ’ ಎಂದು ಹೆಸರು ಹೇಳಲು ಬಯಸದ ಹಿರಿಯ ನಾಯಕರೊಬ್ಬರು ಅಭಿಪ್ರಾಯಪಡುತ್ತಾರೆ.
ತಮ್ಮನ್ನು ಕಡೆಗಣನೆ ಮಾಡುತ್ತಿಲ್ಲ: ಈಶ್ವರಪ್ಪ
ಒಂದೆಡೆ ಶಿವಮೊಗ್ಗ ಬಿಜೆಪಿಯಲ್ಲಿ ಈಶ್ವರಪ್ಪರ ಕಡೆಗಣನೆ ಮಾಡಲಾಗುತ್ತಿದೆ ಎಂಬ ಆರೋಪವನ್ನು ಅವರ ಅಭಿಮಾನಿಗಳು ಮಾಡುತ್ತಿದ್ದಾರೆ. ಮತ್ತೊಂದೆಡೆ ಜಿಲ್ಲಾ ಬಿಜೆಪಿಯಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಈಶ್ವರಪ್ಪಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ‘ಜಿಲ್ಲಾ ಬಿಜೆಪಿಯಲ್ಲಿ ನಿಮ್ಮನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆಯೇ’ ಎನ್ನುವ ಪ್ರಶ್ನೆಗೆ, ತಮ್ಮನ್ನು ಕಡೆಗಣನೆ ಮಾಡಲಾಗುತ್ತಿದೆ ಎನ್ನುವುದು ಸುಳ್ಳು ಎಂದು ಹೇಳಿದ ಅವರು, ಫ್ಲೆಕ್ಸ್‌ಗಳಲ್ಲಿ ಭಾವಚಿತ್ರ ಬಿಟ್ಟು ಹೋಗಿರುವ ಕುರಿತ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಈಶ್ವರಪ್ಪ ಯಾವುದೇ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಲಿಲ್ಲ.







