ಕೀಟನಾಶಕ ತಿಂದು, ಒಂದು ಮಗು ಸಾವು, ಮತ್ತೊಂದರ ಸ್ಥಿತಿ ಚಿಂತಾಜನಕ

ತುಮಕೂರು, ಎ.3: ಇರುವೆ ಸಾಯಿಸಲು ಉಪಯೋಗಿಸುವ ಪ್ಲೋರೈಡ್(ಗೆದ್ದಲುಪುಡಿ) ರಸಾಯನಿಕ ಪುಡಿಯನ್ನು ತಿಂದು ಅಸ್ವಸ್ಥಗೊಂಡಿದ್ದ ಇಬ್ಬರು ಮಕ್ಕಳಲ್ಲಿ ಒಂದು ಮಗು ಸಾವನ್ನಪ್ಪಿ, ಮತ್ತೊಂದು ಮಗು ಚಿಂತಾಜನಕ ಸ್ಥಿತಿಯಲ್ಲಿರುವ ಘಟನೆ ತಾಲೂಕಿನ ಪಾಲಸಂದ್ರ ಸಮೀಪ ಇರುವ ಸಂಕಾಪುರ ಪಾಳ್ಯದಲ್ಲಿ ಸೋಮವಾರ ನಡೆದಿದೆ.
ಗ್ರಾಮದ ಕೃಷಿಕರಾದ ರಂಗಧಾಮಯ್ಯ ಮತ್ತು ಮಂಗಳಮ್ಮ ದಂಪತಿಗಳ ಎರಡು ಹೆಣ್ಣು ಮತ್ತು ಒಂದು ಗುಂಡು ಸೇರಿ ಮೂರು ಮಕ್ಕಳಿದ್ದು, ಲಕ್ಷ್ಮಿಕಾಂತ(7) ಮತ್ತು ದಾಕ್ಷಾಯಿಣಿ(5) ಬೆಳಗ್ಗೆ ಸಕ್ಕರೆ ಪುಡಿಯಂತೆ ಕಾಣುವ ಗೆದ್ದಲುಪುಡಿಯನ್ನು ಮನೆಯವರಿಗೆ ತಿಳಿಯದಂತೆ ತಿಂದಿದ್ದು, ಮಧ್ಯಾಹ್ನದ ವೇಳೆ ಇಬ್ಬರು ಮಕ್ಕಳು ಹೊಟ್ಟೆನೊವಿನಿಂದ ನರಳುತಿದ್ದರಿಂದ ತಕ್ಷಣ ಮಕ್ಕಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಮಧ್ಯಾಹ್ನ 12.50ರ ವೇಳೆಗೆ ದಾಖಲಿಸಲಾಗಿದೆ.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಲಕ್ಷ್ಮಿಕಾಂತ್ ಸಾವನ್ನಪ್ಪಿದ್ದು, ದಾಕ್ಷಾಯಿಣಿಗೆ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳ ಸ್ಥಿತಿ ನೋಡಿ ತಾಯಿ ಮಂಗಳಮ್ಮ ಸಹ ಪ್ರಜ್ಞೆ ಕಳೆದುಕೊಂಡಿದ್ದು, ಆಕೆಗೂ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಕ್ಯಾತ್ಸಂದ್ರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.





