ಇಶ್ರತ್ ಜಹಾನ್ ಪ್ರಕರಣ: ಡಿಜಿಪಿ ಪಾಂಡೆ ರಾಜೀನಾಮೆ ಸ್ವೀಕೃತಿಗೆ ಗುಜರಾತ್ ಸರಕಾರಕ್ಕೆ ಅನುಮತಿ

ಹೊಸದಿಲ್ಲಿ,ಎ.3: ಇಶ್ರತ್ ಜಹಾನ್ ಪ್ರಕರಣದಲ್ಲಿ ಆರೋಪಿಯಾಗಿರುವ ಡಿಜಿಪಿ ಪಿ.ಪಿ.ಪಾಂಡೆ ಅವರ ರಾಜೀನಾಮೆ ಕೊಡುಗೆಯನ್ನು ಸ್ವೀಕರಿಸಲು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಗುಜರಾತ್ ಸರಕಾರಕ್ಕೆ ಅನುಮತಿಯನ್ನು ನೀಡಿದೆ. ರಾಜ್ಯ ಸರಕಾರವು ಬಯಸಿದರೆ ತಕ್ಷಣವೇ ಹುದ್ದೆಯಿಂದ ಕಳಗಿಳಿಯುವುದಾಗಿ ಪಾಂಡೆ ಪತ್ರವನ್ನು ಬರೆದಿದ್ದರು.
ಪಾಂಡೆ ಈಗಾಗಲೇ ತನ್ನ ಹುದ್ದೆಗೆ ರಾಜೀನಾಮೆ ನೀಡಿರುವುದರಿಂದ ಗುಜರಾತ್ ಸರಕಾರವು ಅದನ್ನು ಅಂಗೀಕರಿಸಿದರೆ ಅವರ ಅಧಿಕಾರಾವಧಿಯು ಅಂತ್ಯಗೊಳ್ಳುತ್ತದೆ ಎಂದು ನ್ಯಾಯಾಲಯವು ಹೇಳಿತು. ಪಾಂಡೆ ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದು,ಅದನ್ನು ಎ.30ರವರೆಗೆ ವಿಸ್ತರಿಸಲಾಗಿತ್ತು.
ಪಾಂಡೆ ತನ್ನ ಪತ್ರದಲ್ಲಿ ಹುದ್ದೆಯಿಂದ ಕೆಳಗಿಳಿಯುವ ಇಂಗಿತವನ್ನು ವ್ಯಕ್ತಪಡಿಸಿರುವುದರಿಂದ ಎ.30ರವರೆಗೆ ಅವರ ನೇಮಕಾತಿ ಅಧಿಸೂಚನೆಯನ್ನು ಹಿಂದೆಗೆದುಕೊಳ್ಳುವಂತೆ ನ್ಯಾಯಾಲಯವು ರಾಜ್ಯ ಸರಕಾರವನ್ನು ಆಗ್ರಹಿಸಿತು.
ಮಾಜಿ ಪೊಲೀಸ್ ಮುಖ್ಯಸ್ಥ ಜುಲಿಯೊ ರಿಬೆರೋ ಅವರ ಪರ ವಕೀಲ ಕಪಿಲ್ ಸಿಬಲ್ ಅವರು ಪಾಂಡೆಯವರ ಸೇವೆಯನ್ನು ವಿಸ್ತರಿಸಿರುವುದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿ, ಅವರು ಕೊಲೆ ಆರೋಪಿಯಾಗಿರುವುದನ್ನು ಬೆಟ್ಟು ಮಾಡಿದ್ದರು. ಅವರ ವಿರುದ್ಧ ಕ್ರಿಮಿನಲ್ ಪ್ರಕರಣವಿರುವುದರಿಂದ ಒಂದು ದಿನವೂ ಉನ್ನತ ಹುದ್ದೆಯಲ್ಲಿರಲು ಅವರು ಅರ್ಹರಲ್ಲ ಎಂದು ಸಿಬಲ್ ವಾದಿಸಿದ್ದರು. ಆದರೆ ಪಾಂಡೆಯವರ ನಿವೃತ್ತಿಯ ಬಳಿಕ ಅವರ ಸೇವಾವಧಿಯನ್ನು ವಿಸ್ತರಿಸಲಾಗಿತ್ತು. ಕೇಂದ್ರ ಸರಕಾರದ ಸಂಪುಟದ ನೇಮಕಾತಿ ಸಮಿತಿಯು ಜ.31ಕ್ಕೆ ನಿವೃತ್ತರಾಗಲಿದ್ದ ಪಾಂಡೆಯವರ ಸೇವಾವಧಿಯನ್ನು ಮೂರು ತಿಂಗಳ ಅವಧಿಗೆ ವಿಸ್ತರಿಸಿತ್ತು.
2004,ಜೂ.15ರಂದು ಅಹ್ಮದಾಬಾದ್‌ನ ಹೊರವಲಯದಲ್ಲಿ ಇಷ್ರತ್ ಮತ್ತು ಇತರ ಮೂವರ ಎನ್‌ಕೌಂಟರ್ ನಡೆದ ಸಂದರ್ಭ ಪಾಂಡೆ ಅವರು ರಾಜ್ಯ ಅಪರಾಧ ವಿಭಾಗದ ಮುಖ್ಯಸ್ಥರಾಗಿದ್ದರು.







