ಸಿಂಗಾಪುರ: ಭಾರತೀಯ ಇಮಾಮ್‌ಗೆ ದಂಡ, ಗಡಿಪಾರು
ಕ್ರೈಸ್ತರು, ಯಹೂದಿಗಳ ವಿರುದ್ಧ ಹೇಳಿಕೆಗಾಗಿ ಕ್ರಮ

ಸಿಂಗಾಪುರ, ಎ. 3: ಉಪನ್ಯಾಸವೊಂದರ ವೇಳೆ ಯಹೂದಿಗಳು ಮತ್ತು ಕ್ರೈಸ್ತರ ವಿರುದ್ಧ ವಿವಾದಾಸ್ಪದ ಹೇಳಿಕೆಗಳನ್ನು ನೀಡಿದ ಭಾರತೀಯ ಇಮಾಮ್ ಒಬ್ಬರಿಗೆ ಸಿಂಗಾಪುರದ ನ್ಯಾಯಾಲಯವೊಂದು ಸೋಮವಾರ 4,000 ಸಿಂಗಾಪುರ ಡಾಲರ್ (ಸುಮಾರು 1.86 ಲಕ್ಷ ರೂಪಾಯಿ) ದಂಡ ವಿಧಿಸಿದೆ ಹಾಗೂ ಅವರನ್ನು ಗಡಿಪಾರು ಮಾಡಲು ಆದೇಶಿಸಿದೆ.
ಇದಕ್ಕೂ ಮುನ್ನ, ಶುಕ್ರವಾರ ಜಾಮಿಯಾ ಚುಲಿಯ ಮಸೀದಿಯಲ್ಲಿ ಮುಖ್ಯ ಇಮಾಮ್ ಆಗಿರುವ ನಲ್ಲ ಮುಹಮ್ಮದ್ ಅಬ್ದುಲ್ ಜಮೀಲ್, ಕ್ರೈಸ್ತ, ಸಿಖ್, ತಾವೊಯಿಸ್ಟ್, ಬೌದ್ಧ ಮತ್ತು ಹಿಂದೂ ಪ್ರತಿನಿಧಿಗಳು ಹಾಗೂ ಫೆಡರೇಶನ್ ಆಫ್ ಇಂಡಿಯನ್ ಮುಸ್ಲಿಮ್ಸ್ ಸದಸ್ಯರ ಸಮ್ಮುಖದಲ್ಲಿ ಕ್ಷಮೆ ಕೋರಿದ್ದರು. ತನ್ನ ಹೇಳಿಕೆಗಳಿಂದ ಉಂಟಾಗಿರುವ ಉದ್ವಿಗ್ನತೆ, ಅನನುಕೂಲ ಮತ್ತು ಕ್ಲೇಶಕ್ಕಾಗಿ ಪಶ್ಚಾತ್ತಾಪ ಪಡುತ್ತಿದ್ದೇನೆ ಎಂದು ಅವರು ಹೇಳಿದ್ದರು.
ಜಮೀಲ್ ದಂಡ ಪಾವತಿಸಿದ್ದಾರೆ ಹಾಗೂ ಅವರನ್ನು ಗಡಿಪಾರು ಮಾಡಲಾಗುವುದು ಎಂದು ಸಿಂಗಾಪುರದ ಗೃಹ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ ಎಂದು ‘ಚಾನೆಲ್ ನ್ಯೂಸ್ ಏಶ್ಯ’ ವರದಿ ಮಾಡಿದೆ. ವಿವಿಧ ಗುಂಪುಗಳ ನಡುವೆ ಧರ್ಮ ಅಥವಾ ಜನಾಂಗಗಳ ಆಧಾರದಲ್ಲಿ ವೈರತ್ವವನ್ನು ಪ್ರಚೋದಿಸಿರುವ ಆರೋಪವನ್ನು ನ್ಯಾಯಾಲಯದಲ್ಲಿ ಅವರು ಒಪ್ಪಿಕೊಂಡಿದ್ದಾರೆ.
‘ಕೊಂಚ ವಿಷಾದದೊಂದಿಗೆ’ ಜಮೀಲ್ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ. ಅವರು ಕಳೆದ ಏಳು ವರ್ಷಗಳ ಅವಧಿಯಲ್ಲಿ ಜಾಮಿಯಾ ಚೂಲಿಯ ಮಸೀದಯ ಮುಖ್ಯ ಇಮಾಮ್ ಆಗಿ ಕಠಿಣ ಪರಿಶ್ರಮ ಪಟ್ಟಿದ್ದಾರೆ ಎಂದು ಅದು ಹೇಳಿದೆ. ‘‘ಅವರು ಉದ್ದೇಶಪೂರ್ವಕವಾಗಿ ಕೆಟ್ಟ ಬೋಧನೆ ಮಾಡಿಲ್ಲ’’ ಎಂದಿದೆ.







