ಮಹಿಳಾ ಹಾಕಿ ವಿಶ್ವ ಲೀಗ್:ಭಾರತಕ್ಕೆ ಸತತ 2ನೆ ಜಯ

ವೆಸ್ಟ್ ವ್ಯಾಂಕೊವರ್(ಕೆನಡಾ), ಎ.3: ವಂದನಾ ಕಟಾರಿಯಾ ಬಾರಿಸಿದ ಏಕೈಕ ಗೋಲು ನೆರವಿನಿಂದ ಭಾರತದ ಮಹಿಳಾ ಹಾಕಿ ತಂಡ ವಿಶ್ವ ಲೀಗ್‌ನ 2ನೆ ಸುತ್ತಿನಲ್ಲಿ ಬೆಲಾರುಸ್ ತಂಡವನ್ನು 1-0ರಿಂದ ಮಣಿಸಿತು. ಈ ಮೂಲಕ ಎ ಗುಂಪಿನಲ್ಲಿ ಸತತ 2ನೆ ಗೆಲುವು ಸಾಧಿಸಿದೆ.
ಭಾರತ ರವಿವಾರ ನಡೆದ ಮೊದಲ ಪಂದ್ಯದಲ್ಲಿ ಉರುಗ್ವೆ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳ ಅಂತರದಿಂದ ರೋಚಕವಾಗಿ ಮಣಿಸಿತ್ತು.
26ನೆ ನಿಮಿಷದಲ್ಲಿ ಫೀಲ್ಡ್ ಗೋಲು ಬಾರಿಸಿದ ವಂದನಾ ಭಾರತಕ್ಕೆ 1-0 ಅಂತರದಿಂದ ಗೆಲುವು ಸಾಧಿಸಲು ನೆರವಾದರು. ಈ ಗೆಲುವಿನ ಮೂಲಕ ಭಾರತ ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದಲ್ಲದೆ ಸೆಮಿ ಫೈನಲ್ ಸ್ಥಾನವನ್ನು ಖಚಿತಪಡಿಸಿದೆ.
ಉಭಯ ತಂಡಗಳು ಆರಂಭದಲ್ಲಿ ತೀವ್ರ ಪೈಪೋಟಿ ನಡೆಸಿದ್ದು, ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪಡೆದಿದ್ದವು. ಆದರೆ, ಎರಡೂ ತಂಡಗಳು ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಲು ವಿಫಲವಾದವು. ಭಾರತ 21ನೆ ನಿಮಿಷದಲ್ಲಿ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. ಆದರೆ,ಅದನ್ನು ಸದುಪಯೋಗಪಡಿಸಿಕೊಳ್ಳಲಿಲ್ಲ. 22ನೆ ನಿಮಿಷದಲ್ಲಿ ಬೆಲಾರುಸ್ ತಂಡ ಪೆನಾಲ್ಟಿ ಗೋಲು ಬಾರಿಸಲು ಯತ್ನಿಸಿತು. ಗೋಲ್‌ಕೀಪರ್ ಸವಿತಾ ಬೆಲಾರುಸ್‌ನ ಪ್ರಯತ್ನವನ್ನು ವಿಫಲಗೊಳಿಸಿದರು.
25ನೆ ನಿಮಿಷದಲ್ಲಿ ಗೋಲು ಬಾರಿಸಿದ ವಂದನಾ ಭಾರತ ಮೊದಲಾರ್ಧದ ಅಂತ್ಯಕ್ಕೆ 1-0 ಮುನ್ನಡೆ ಪಡೆಯಲು ನೆರವಾದರು. ವಂದನಾ ಟೂರ್ನಿಯಲ್ಲಿ ಬಾರಿಸಿದ 2ನೆ ಗೋಲು ಇದಾಗಿದೆ.
ದ್ವಿತೀಯಾರ್ಧದಲ್ಲಿ ರಕ್ಷಣಾ ಕೌಶಲ್ಯ ಪ್ರದರ್ಶಿಸಿದ ಭಾರತ ಮುನ್ನಡೆಯನ್ನು ಉಳಿಸಿಕೊಂಡಿತು. ಭಾರತ ಈ ವೇಳೆ 3 ಪೆನಾಲ್ಟಿ ಕಾರ್ನರ್ ಅವಕಾಶವನ್ನು ಪಡೆದರೂ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಬೆಲಾರುಸ್ 58ನೆ ನಿಮಿಷದಲ್ಲಿ ಗೋಲು ಬಾರಿಸಿ ಸಮಬಲ ಸಾಧಿಸುವತ್ತ ಸಾಗಿತ್ತು. ಆದರೆ, ಗೋಲ್‌ಕೀಪರ್ ಸವಿತಾ ಗೋಲನ್ನು ತಡೆದು ಭಾರತ 1-0 ಮುನ್ನಡೆಯೊಂದಿಗೆ ಪಂದ್ಯ ಜಯಿಸಲು ಕಾರಣರಾದರು.







