ಐಪಿಎಲ್‌ಗೆ ದಶಕದ ಸಂಭ್ರಮ: ಆರು ಚಾಂಪಿಯನ್‌ಗಳು

ಹೊಸದಿಲ್ಲಿ, ಎ.3: ದೇಶೀಯ ಟ್ವೆಂಟಿ-20 ಟೂರ್ನಿ ಐಪಿಎಲ್ ಈ ವಾರ ಅದ್ದೂರಿಯಾಗಿ ಆರಂಭವಾಗಲಿದೆ. ಈ ವರ್ಷ 10ನೆ ಆವೃತ್ತಿಯ ಟೂರ್ನಿ ನಡೆಯಲಿದ್ದು, ಕಳೆದ 9 ಟೂರ್ನಿಗಳಲ್ಲಿ ಆರು ತಂಡಗಳು ಚಾಂಪಿಯನ್‌ಪಟ್ಟಕ್ಕೇರಿವೆ. ಆ ಕುರಿತ ಹಿನ್ನೋಟ ಇಲ್ಲಿದೆ.
2008: ಶೇನ್ ವಾರ್ನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ಚೊಚ್ಚಲ ಚಾಂಪಿಯನ್
ಆಸ್ಟ್ರೇಲಿಯದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡ ಜೂ.1 ರಂದು ಮುಂಬೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿತ್ತು. ಯೂಸುಫ್ ಪಠಾಣ್ 3 ವಿಕೆಟ್‌ಗಳನ್ನು ಕಬಳಿಸಿದರೂ ಚೆನ್ನೈ 5 ವಿಕೆಟ್‌ಗೆ 163 ರನ್ ಗಳಿಸಿತ್ತು. ಬ್ಯಾಟಿಂಗ್‌ನಲ್ಲೂ ಮಿಂಚಿದ್ದ ಪಠಾಣ್(56 ರನ್, 39 ಎಸೆತ, 3 ಬೌಂಡರಿ, 4 ಸಿಕ್ಸರ್) ರಾಜಸ್ಥಾನ ಕೊನೆಯ ಎಸೆತದಲ್ಲಿ ಪಂದ್ಯ ಜಯಿಸಲು ಪ್ರಮುಖ ಪಾತ್ರವಹಿಸಿದ್ದರು.
2009: ಆ್ಯಡಂ ಗಿಲ್‌ಕ್ರಿಸ್ಟ್ ನಾಯಕತ್ವದ ಡೆಕ್ಕನ್ ಚಾರ್ಜರ್ಸ್‌ಗೆ ಒಲಿದ ಟ್ರೋಫಿ
ಭಾರತದಲ್ಲಿ ಚುನಾವಣೆಯಿದ್ದ ಕಾರಣ ದಕ್ಷಿಣ ಆಫ್ರಿಕದಲ್ಲಿ ಸ್ಥಳಾಂತರಗೊಂಡಿದ್ದ 2009ರ ಐಪಿಎಲ್‌ನಲ್ಲಿ ಗಿಲ್‌ಕ್ರಿಸ್ಟ್ ಸಾರಥ್ಯದ ಡೆಕ್ಕನ್ ತಂಡ ಮೇ 24 ರಂದು ನಡೆದಿದ್ದ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು. ಬೆಂಗಳೂರು ನಾಯಕ ಅನಿಲ್ ಕುಂಬ್ಳೆ 4 ವಿಕೆಟ್ ಪಡೆದು ಡೆಕ್ಕನ್ ತಂಡವನ್ನು 6ಕ್ಕೆ 143 ರನ್‌ಗೆ ನಿಯಂತ್ರಿಸಿದ್ದರು. ಬೆಂಗಳೂರು ಬ್ಯಾಟ್ಸ್‌ಮನ್‌ಗಳು ದೊಡ್ಡ ಸ್ಕೋರ್ ಗಳಿಸಲು ವಿಫಲವಾದ ಕಾರಣ ಡೆಕ್ಕನ್ ತಂಡ 6 ರನ್‌ಗಳ ಜಯ ಸಾಧಿಸಿತ್ತು.
2010: ಚೆನ್ನೈ ಸೂಪರ್ ಕಿಂಗ್ಸ್‌ಗೆ ಒಲಿದ ಮೊದಲ ಪ್ರಶಸ್ತಿ:
ಎಂಎಸ್ ಧೋನಿ ನೇತೃತ್ವದ ಚೆನ್ನೈ ತಂಡ ಮುಂಬೈನಲ್ಲಿ ಎ.25 ರಂದು ನಡೆದಿದ್ದ ಫೈನಲ್‌ನಲ್ಲಿ ಸುರೇಶ್‌ರೈನಾ(ಅಜೇಯ 57)ಸಾಹಸದಿಂದ 5ಕ್ಕೆ 168 ರನ್ ಗಳಿಸಿತ್ತು. ಸಚಿನ್ ತೆಂಡುಲ್ಕರ್(48ರನ್) ಸಾಹಸದ ಹೊರತಾಗಿಯೂ ಮುಂಬೈ ಇಂಡಿಯನ್ಸ್ ತಂಡ 22 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತ್ತು. ಚೆನ್ನೈ ಚೊಚ್ಚಲ ಐಪಿಎಲ್ ಪ್ರಶಸ್ತಿ ಜಯಿಸಿತ್ತು. 2011: ಚೆನ್ನೈಗೆ ಸತತ ಎರಡನೆ ಐಪಿಎಲ್ ಕಿರೀಟ:
ಭಾರತ 2011ರ ಎ.2 ರಂದು ಏಕದಿನ ವಿಶ್ವಕಪ್ ಜಯಿಸಿತ್ತು. ಎ.8 ರಿಂದ 4ನೆ ಐಪಿಎಲ್ ಆರಂಭವಾಗಿತ್ತು. ಮೇ 29ರಂದು ಮುಂಬೈನಲ್ಲಿ ನಡೆದಿದ್ದ ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ತಂಡ ಮೈಕಲ್ ಹಸ್ಸಿ(63), ಮುರಳಿ ವಿಜಯ್(95), ನಾಯಕ ಧೋನಿ(22) ನೆರವಿನಿಂದ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತ್ತು. ಮೊದಲ ಓವರ್‌ನಲ್ಲಿ ಕ್ರಿಸ್‌ಗೇಲ್ ವಿಕೆಟ್ ಕಳೆದುಕೊಂಡ ಆರ್‌ಸಿಬಿ 8 ವಿಕೆಟ್‌ಗೆ 147 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಚೆನ್ನೈ ಸತತ 2ನೆ ಬಾರಿ ಟ್ರೋಫಿ ಜಯಿಸಿತ್ತು.
2012: ಚೆನ್ನೈಗೆ ಹ್ಯಾಟ್ರಿಕ್ ಪ್ರಶಸ್ತಿ ನಿರಾಕರಿಸಿದ ಕೆಕೆಆರ್:
ಸತತ 3ನೆ ಬಾರಿ ಐಪಿಎಲ್ ಫೈನಲ್ ಪಂದ್ಯವನ್ನು ಆಡಿದ್ದ ಚೆನ್ನೈ ಮೇ 27 ರಂದು ನಡೆದ ಕೆಕೆಆರ್ ವಿರುದ್ಧದ ಫೈನಲ್‌ನಲ್ಲಿ ಪಂದ್ಯ ಗೆಲ್ಲುವ ಫೇವರಿಟ್ ತಂಡವಾಗಿತ್ತು. ಹಸ್ಸಿ, ವಿಜಯ್ ಹಾಗೂ ರೈನಾ ನೆರವಿನಿಂದ ಚೆನ್ನೈ 3 ವಿಕೆಟ್‌ಗೆ 190 ರನ್ ಗಳಿಸಿತ್ತು. ಕೆಕೆಆರ್ ಮೊದಲ ಓವರ್‌ನಲ್ಲಿ ನಾಯಕ ಗೌತಮ್ ಗಂಭೀರ್‌ರನ್ನು ಕಳೆದುಕೊಂಡಿತ್ತು. ಮನ್ವಿಂದರ್ ಬಿಸ್ಲಾ ಹಾಗೂ ಜಾಕ್ ಕಾಲಿಸ್ 2ನೆ ವಿಕೆಟ್‌ಗೆ 136 ರನ್ ಜೊತೆಯಾಟ ನಡೆಸಿದರು. ಅಲ್ಬಿ ಮೊರ್ಕೆಲ್(89, 48 ಎಸೆತ) ಭರ್ಜರಿ ಬ್ಯಾಟಿಂಗ್ ಮಾಡಿ ಕೆಕೆಆರ್‌ಗೆ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆದ್ದುಕೊಟ್ಟಿದ್ದರು.
2013: ಮುಂಬೈಗೆ ಒಲಿದ ಮೊದಲ ಐಪಿಎಲ್ ಪ್ರಶಸ್ತಿ:
2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಹಗರಣದಿಂದ ಬೆಚ್ಚಿಬೀಳಿಸಿತ್ತು. ಮೇ 26 ರಂದು ಚೆನ್ನೈನಲ್ಲಿ ನಡೆದ ಫೈನಲ್‌ನಲ್ಲಿ ಚೆನ್ನೈ ತಂಡವನ್ನು 23 ರನ್‌ಗಳ ಅಂತರದಿಂದ ಮಣಿಸಿದ ಮುಂಬೈ ಇಂಡಿಯನ್ಸ್ ಚೊಚ್ಚಲ ಐಪಿಎಲ್ ಪ್ರಶಸ್ತಿ ಜಯಿಸಿತ್ತು. 2ನೆ ಬಾರಿ ಫೈನಲ್‌ನಲ್ಲಿ ಆಡಿದ್ದ ರೋಹಿತ್ ಶರ್ಮ ನೇತೃತ್ವದ ಮುಂಬೈ ಹಗರಣ ಪೀಡಿತ ಐಪಿಎಲ್‌ನಲ್ಲಿ ಚಾಂಪಿಯನ್ ಆಗಿತ್ತು. ಫೈನಲ್ ಬಳಿಕ ಸಚಿನ್ ತೆಂಡುಲ್ಕರ್ ನಿವೃತ್ತಿ ಘೋಷಿಸಿದ್ದರು.
2014: ಎರಡನೆ ಬಾರಿ ಐಪಿಎಲ್ ಟ್ರೋಫಿ ಜಯಿಸಿದ್ದ ಕೆಕೆಆರ್:
ಬೆಂಗಳೂರಿನಲ್ಲಿ ಜೂ.1 ರಂದು ನಡೆದಿದ್ದ ಐಪಿಎಲ್ ಫೈನಲ್‌ನಲ್ಲಿ ಮನೀಶ್ ಪಾಂಡೆ(94 ರನ್, 50 ಎಸೆತ) ವೀರೋಚಿತ ಪ್ರದರ್ಶನದ ಸಹಾಯದಿಂದ ಕೆಕೆಆರ್ ತಂಡ ಮೊದಲ ಫೈನಲ್ ಆಡಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಕೇವಲ 3 ಎಸೆತ ಬಾಕಿಯಿರುವಾಗಲೇ 3 ವಿಕೆಟ್ ಅಂತರದಿಂದ ಮಣಿಸಿತ್ತು. ಪಂಜಾಬ್ ಪರ ವೃದ್ದಿಮಾನ್ ಸಹಾ ಬಾರಿಸಿದ್ದ ಶತಕ(116) ವ್ಯರ್ಥವಾಗಿತ್ತು. 2015: ಮುಂಬೈ ಮಡಿಲಿಗೆ ಸತತ ಎರಡನೆ ಚಾಂಪಿಯನ್‌ಶಿಪ್:
ಚೆನ್ನೈ ಸೂಪರ್ ಕಿಂಗ್ಸ್ ತಂಡ ನಾಲ್ಕನೆ ಬಾರಿ ಐಪಿಎಲ್ ಫೈನಲ್‌ಗೆ ತಲುಪಿತ್ತು. ಆದರೆ, ಮೇ24 ರಂದು ಕೋಲ್ಕತಾದಲ್ಲಿ ನಡೆದಿದ್ದ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 41 ರನ್‌ಗಳಿಂದ ಸೋಲುಂಡಿತ್ತು. ಎರಡನೆ ಬಾರಿ ಐಪಿಎಲ್ ಟ್ರೋಫಿ ಜಯಿಸಿದ್ದ ಮುಂಬೈ ತಂಡ ಕೆಕೆಆರ್ ಹಾಗೂ ಚೆನ್ನೈ ಬಳಿಕ ಈ ಸಾಧನೆ ಮಾಡಿದ 3ನೆ ತಂಡ ಎನಿಸಿಕೊಂಡಿತ್ತು.
2016: ವಾರ್ನರ್ ನೇತೃತ್ವದ ಹೈದರಾಬಾದ್‌ಗೆ ಒಲಿದ ಪ್ರಶಸ್ತಿ:
ಡೇವಿಡ್ ವಾರ್ನರ್ ನೇತೃತ್ವದ ಹೈದರಾಬಾದ್ ತಂಡ ಆರ್‌ಸಿಬಿಯನ್ನು ಮಣಿಸಿ ಚೊಚ್ಚಲ ಪ್ರಶಸ್ತಿ ಜಯಿಸಿತ್ತು. ವಾರ್ನರ್ ನಾಯಕನಾಗಿ ಐಪಿಎಲ್ ಪ್ರಶಸ್ತಿ ಜಯಿಸಿದ್ದ ಆಸೀಸ್‌ನ ಮೂರನೆ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಮೇ 29 ರಂದು ಬೆಂಗಳೂರಿನಲ್ಲಿ ನಡೆದಿದ್ದ ಫೈನಲ್‌ನಲ್ಲಿ ಹೈದರಾಬಾದ್ 7 ವಿಕೆಟ್‌ಗೆ 208 ರನ್ ಗಳಿಸಿತ್ತು. ಆರಂಭಿಕ ಆಟಗಾರರಾದ ಕ್ರಿಸ್ ಗೇಲ್(76) ಹಾಗೂ ಕೊಹ್ಲಿಯ(54) ಅಬ್ಬರದ ಆರಂಭದ ಹೊರತಾಗಿಯೂ ಆರ್‌ಸಿಬಿ 7 ವಿಕೆಟ್‌ಗಳ ನಷ್ಟಕ್ಕೆ 200 ರನ್ ಗಳಿಸಿ 8 ರನ್‌ಗಳಿಂದ ಸೋಲೊಪ್ಪಿಕೊಂಡಿತ್ತು.
ರನ್ ಚೇಸಿಂಗ್‌ನಲ್ಲಿ ತಾನು ನಿಪುಣ ಎಂದು ಐಪಿಎಲ್-9ರಲ್ಲಿ ವಿರಾಟ್ ಕೊಹ್ಲಿ ತೋರಿಸಿಕೊಟ್ಟಿದ್ದರು. ಆರ್‌ಸಿಬಿಗೆ ಪ್ಲೇ-ಆಫ್‌ಗೆ ತೇರ್ಗಡೆಯಾಗಲು 4ರಲ್ಲಿ 4 ಪಂದ್ಯವನ್ನು ಗೆಲ್ಲಲೇಬೇಕಾಗಿತ್ತು. ಆರ್‌ಸಿಬಿ ನಾಯಕ ಕೊಹ್ಲಿ 109, ಅಜೇಯ 75, 113 ಹಾಗೂ ಅಜೇಯ 54 ರನ್ ಗಳಿಸಿ ಅಂಕಪಟ್ಟಿಯಲ್ಲಿ 2ನೆ ಸ್ಥಾನಕ್ಕೆ ತಲುಪಲು ನೆರವಾಗಿದ್ದರು. ಒಂದೇ ಐಪಿಎಲ್‌ನಲ್ಲಿ 2 ಬಾರಿ ಶತಕ ಬಾರಿಸಿದ ಏಕೈಕ ನಾಯಕನಾಗಿದ್ದ ಕೊಹ್ಲಿ ಒಟ್ಟು 973 ರನ್ ಗಳಿಸಿದ್ದರು. ಮೊದಲ ಕ್ವಾಲಿಫೈಯರ್‌ನಲ್ಲಿ ಗುಜರಾತ್ ಲಯನ್ಸ್ ತಂಡವನ್ನು ಮಣಿಸಿದ್ದ ಆರ್‌ಸಿಬಿ ಫೈನಲ್‌ಗೆ ತಲುಪಿತ್ತು.







