ಶಾಸಕನನ್ನೇ ಥಳಿಸಿದ ಟೋಲ್ ಸಿಬ್ಬಂದಿ

ಲಕ್ನೋ,ಎ.4: ಶಾಸಕರು ತಮ್ಮ ವಾಹನಗಳಿಗೆ ಸೈರನ್ ಮತ್ತು ಪಕ್ಷದ ಧ್ವಜ ಬಳಸುವಂತಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಸೂಚನೆ ನೀಡಿದ ಬೆನ್ನಲ್ಲೇ, ಅಲೀಗಢದಲ್ಲಿ ಶಾಸಕ ವಿಜಯ್ ಕಶ್ಯಪ್ ಅವರ ವಾಹನವನ್ನು ಗುರುತಿಸಲಾಗದೇ ವಿಐಪಿ ಲೇನ್‌ನಲ್ಲಿ ಕಾರು ಚಲಾಯಿಸಿದ ಕಾರಣಕ್ಕಾಗಿ ಶಾಸಕ ಹಾಗೂ ಅವರ ಬೆಂಬಲಿಗರನ್ನು ಟೋಲ್ ಸಿಬ್ಬಂದಿ ಥಳಿಸಿದ ಘಟನೆ ವರದಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಒಬ್ಬ ಟೋಲ್ ಸಿಬ್ಬಂದಿಯನ್ನು ಬಂಧಿಸಲಾಗಿದೆ.
ಲಕ್ನೋದಿಂದ ಸಹರಣಪುರಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. "ನನ್ನ ಚಾಲಕ ವಿಐಪಿ ಲೇನ್‌ನಲ್ಲಿ ವಾಹನ ಚಲಾಯಿಸಿದಾಗ, ಭದ್ರತಾ ಸಿಬ್ಬಂದಿ ತಡೆದ. ಆಗ ಈ ಕಾರು ಶಾಸಕರದ್ದು ಎಂದು ಚಾಲಕ ಹೇಳಿದ. ಶಾಸಕರು ಎಂದು ಫೋಸ್ ನೀಡುವ ಹಲವು ಮಂದಿಯನ್ನು ನಾನು ನೋಡಿದ್ದೇನೆ ಎಂದು ಹೇಳಿದ ಸಿಬ್ಬಂದಿ, ಕಾರಿನಲ್ಲಿದ್ದವರನ್ನು ಕೆಳಗೆ ಇಳಿಯುವಂತೆ ಸೂಚಿಸಿದ. ನನ್ನ ಸ್ನೇಹಿತರು ನನ್ನ ಗುರುತಿನ ಪತ್ರ ತೋರಿಸಿದ್ದಕ್ಕೆ ಅದನ್ನು ಎಸೆದ" ಎಂದು ಕಶ್ಯಪ್ ಹೇಳಿದ್ದಾರೆ.
ಆಗ ಶಾಸಕರ ಬೆಂಬಲಿಗರು ಹಾಗೂ ಟೋಲ್ ಸಿಬ್ಬಂದಿ ನಡುವೆ ವಾಗ್ವಾದ ಆರಂಭವಾಯಿತು. ಟೋಲ್ ಸಿಬ್ಬಂದಿ ನನಗೂ ಹೊಡೆಯಲು ಬಂದರು. ಅವರಿಂದ ತಪ್ಪಿಸಿಕೊಂಡು ವಿಶೇಷ ಎಸ್ಪಿಗೆ ತಕ್ಷಣ ಕರೆ ಮಾಡಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಎಫ್‌ಐಆರ್ ದಾಖಲಿಸಿಕೊಂಡರು ಎಂದು ವಿವರಿಸಿದ್ದಾರೆ.
ಮೂವರು ಸಿಬ್ಬಂದಿ ಹಾಗೂ 20 ಮಂದಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಈ ದೃಶ್ಯಾವಳಿ ಸಿಸಿಟಿವಿಯಲ್ಲಿ ದಾಖಲಾಗಿಲ್ಲ.