ಮೋದಿ ಸರಕಾರದಿಂದ ಮಾಧ್ಯಮಗಳ ಮೇಲೆ ವ್ಯಾಪಕ ಹಿಡಿತ : ಚಿದಂಬರಂ ಆರೋಪ

ಹೊಸದಿಲ್ಲಿ,ಎ.4 : ಮಾಧ್ಯಮ ಸಂಸ್ಥೆಗಳ ಮೇಲೆ ನರೇಂದ್ರ ಮೋದಿ ಸರಕಾರವು ವ್ಯಾಪಕವಾಗಿ, ವ್ಯವಸ್ಥಿತವಾಗಿ ನಿಯಂತ್ರಣ ಹೊಂದಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಆರೋಪಿಸಿದ್ದಾರೆ.
ತಮ್ಮ ಕೃತಿ ‘‘ಫಿಯರ್ಲೆಸ್ ಇನ್ ಒಪ್ಪೊಸಿಶನ್ -ಪವರ್ ಎಂಡ್ ಅಕೌಂಟೆಬಿಲಿಟಿ’’ ಬಿಡುಗಡೆ ಸಮಾರಂಭದ ನಂತರ ನಡೆದ ಸಂವಾದವೊಂದರಲ್ಲಿ ಮಾತನಾಡುತ್ತಾ ಚಿದಂಬರಂ ಮೇಲಿನಂತೆ ಹೇಳಿದರು. ‘‘ನೀವು ದೆಹಲಿಯ ಯಾವುದೇ ಪತ್ರಕರ್ತರ ಜತೆ ಮಾತನಾಡಿ. ಅವರು ನಿಮಗೆ ಹೇಳುತ್ತಾರೆ. ಕಥೆಗಳನ್ನು ಸುಮ್ಮನೆ ಕೊಲ್ಲಲಾಗುತ್ತಿದೆ. ಇದು ಗಂಭೀರ ಸಮಸ್ಯೆ’’ ಎಂದರು ಚಿದಂಬರಂ.
ತುರ್ತುಪರಿಸ್ಥಿತಿಯ ಸಂದರ್ಭವೂ ಮಾಧ್ಯಮದ ಮೇಲೆ ಸರಕಾರ ಹಿಡಿತ ಹೊಂದಿತ್ತು ಎಂಬುದನ್ನು ಒಪ್ಪಿಕೊಂಡ ಚಿದಂಬರಂ ಅದೇ ಸಮಯ ಆಗಿನ ನಿಯಂತ್ರಣ ಸ್ವಾಗತಾರ್ಹವಾಗಿರಲಿಲ್ಲ ಎಂದರು.
‘‘ಇಂದು ಮಾಧ್ಯಮದ ಮೇಲಿನ ಸರಕಾರದ ಹಿಡಿತಕ್ಕೆ ಪಾರವೇ ಇಲ್ಲವಾಗಿದೆ. ತುರ್ತುಪರಿಸ್ಥಿತಿಯ ಸಂದರ್ಭದ ನಿಯಂತ್ರಣಕ್ಕೆ ನಾವು ಕ್ಷಮೆ ಯಾಚಿಸಿದ್ದೇವೆ,’’ ಎಂದು ಚಿದಂಬರಂ ಹೇಳಿದರು.
ಮುಂದೆ ಗುಜರಾತ್ ಮತ್ತು ರಾಜಸ್ಥಾಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಗಳಲ್ಲಿ ಪ್ರಾದೇಶಿಕ ಪಕ್ಷಗಳ ಅನುಪಸ್ಥಿತಿಯಿಂದಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿಯಿರುವುದು ಎಂದು ಹೇಳಿದರು. ಎಲ್ಲಾ ರಾಜ್ಯ ಚುನಾವಣೆಗಳಲ್ಲಿ ಪ್ರಾದೇಶಿಕ ಪಕ್ಷಗಳು ಸೋಲುಂಡಿವೆ ಎಂದು ಹೇಳಿದ ಅವರು ಅದೇ ಸಮಯ ಇದರರ್ಥ ಪ್ರಾದೇಶಿಕ ಪಕ್ಷಗಳ ಅಂತ್ಯವೆಂದೇನಲ್ಲ, ಎಂದರು.