ಮಹಾರಾಷ್ಟ್ರ: 60 ಲ.ರೂ.ಬ್ಯಾಂಕ್ ಸಾಲ ತೀರಿಸಲಾಗದೆ ಸೋದರರಿಬ್ಬರ ಆತ್ಮಹತ್ಯೆ

ಮುಂಬೈ,ಎ.4: ಬ್ಯಾಂಕ್ ಸಾಲವನ್ನು ತೀರಿಸಲು ಸಾಧ್ಯವಾಗದೆ ಸತಾರಾ ಜಿಲ್ಲೆಯ ಕರಾಡ್‌ನ ಸೋದರರಿಬ್ಬರು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಪೊಲೀಸರು ಇವುಗಳನ್ನು ‘ಆಕಸ್ಮಿಕ ಸಾವುಗಳು ‘ಎಂದು ದಾಖಲಿಸಿಕೊಂಡಿದ್ದಾರೆ.
ಕರಾಡ್ ಸಮೀಪದ ಕಡೇಗಾವ್ ಎಂಐಡಿಸಿಯಲ್ಲಿ ಕೃಷಿ ಸಂಸ್ಕರಣೆ ಘಟಕವೊಂದನ್ನು ನಡೆಸುತ್ತಿದ್ದ ವಿಜಯ್ ಮತ್ತು ಜಗನ್ನಾಥ ಚವಾಣ್ ಅದಕ್ಕಾಗಿ 60 ಲ.ರೂ.ಸಾಲ ಮಾಡಿದ್ದರು. ಸಮಯಕ್ಕೆ ಸರಿಯಾಗಿ ಸಾಲ ಪಾವತಿಸದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸಾಲ ವಸೂಲಿ ಏಜಂಟರು ಈ ಸೋದರರ ಹಿಂದೆ ಬಿದ್ದು ಹಣಕ್ಕಾಗಿ ಪೀಡಿಸುತ್ತಿದ್ದರು.
ಎ.1ಕ್ಕೆ ಹೊಸ ಆರ್ಥಿಕ ವರ್ಷ ಆರಂಭಕ್ಕೆ ಮುನ್ನ ಸಾಲ ವಸೂಲಿ ಮಾಡುವ ಧಾವಂತದಲ್ಲಿದ್ದ ಬ್ಯಾಂಕಿನ ಪ್ರತಿನಿಧಿಗಳ ನಿರಂತರ ಫೋನ್ ಕರೆಗಳಿಂದ ಸೋದರ ರಿಬ್ಬರೂ ಕಂಗಾಲಾಗಿದ್ದರು ಎಂದು ಸಂಬಂಧಿಗಳು ತಿಳಿಸಿದ್ದಾರೆ. ಸೋಮವಾರ ಸಂಜೆ ವಿಜಯ ಚವಾಣ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಕೆಲವು ಗಂಟೆಗಳ ಬಳಿಕ ಜಗನ್ನಾಥ ಚಲಿಸುತ್ತಿದ್ದ ರೈಲಿನ ಎದುರಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸೋದರರಿಬ್ಬರೂ ಬಿಎಸ್ಸಿ(ಕೃಷಿ) ಪದವೀಧರರಾಗಿದ್ದು, ಮೂರು ವರ್ಷಗಳ ಹಿಂದಷ್ಟೇ ಕೃಷಿ ಸಂಸ್ಕರಣೆ ಘಟಕವನ್ನು ಆರಂಭಿಸಿದ್ದರು.