ರಾಮನವಮಿ ಪೋಸ್ಟರ್‌ಗಳಿಗೆ ಹಾನಿ: ಬಿಹಾರದಲ್ಲಿ ಕೋಮು ಉದ್ವಿಗ್ನತೆ

ಪಾಟ್ನಾ,ಎ.4: ಬುಧವಾರ ನಡೆಯಲಿರುವ ರಾಮನವಮಿ ಉತ್ಸವದ ಪೋಸ್ಟರ್‌ಗಳನ್ನು ಸಮಾಜ ವಿರೋಧ ಶಕ್ತಿಗಳು ಹರಿದ ಹಿನ್ನೆಲೆಯಲ್ಲಿ ಬಿಹಾರದ ನವಡಾ ಪಟ್ಟಣದಲ್ಲಿ ಮಂಗಳವಾರ ಕೋಮು ಉದ್ವಿಗ್ನತೆ ತಲೆದೋರಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಂದೋಬಸ್ತ್ ಏರ್ಪಡಿಸಲಾಗಿದೆ ಮತ್ತು ಪರಿಸ್ಥಿತಿಯು ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ತಡೆದ ನೂರಾರು ಜನರು ಪ್ರತಿಭಟನೆ ನಡೆಸಿ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ಸದ್ಭಾವನಾ ಚೌಕದ ಬಳಿ ಇನ್ನೊಂದು ಸಮುದಾಯದ ಕೆಲವು ಯುವಕರು ಪ್ರತಿಭಟನಾಕಾರರತ್ತ ಕಲ್ಲುಗಳನ್ನು ತೂರಿದಾಗ ಪರಿಸ್ಥಿತಿಯು ಕೋಮುಬಣ್ಣವನ್ನು ಪಡೆದುಕೊಂಡಿತು.
ಎರಡೂ ಗುಂಪುಗಳು ಘೋಷಣೆಗಳನ್ನು ಕೂಗುತ್ತ ಘರ್ಷಣೆಗಿಳಿದು,ಪರಸ್ಪರರತ್ತ ಕಲ್ಲುತೂರಾಟದಲ್ಲಿ ತೊಡಗಿದ್ದವು. ವಾಹನಗಳ ಗಾಜು ಹುಡಿ ಮಾಡಲಾಗಿದ್ದು, ಕೆಲವು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಎಸ್‌ಪಿ ವಿಕಾಸ್ ಬರ್ಮನ್ ತಿಳಿಸಿದರು.
ಪರಿಸ್ಥಿತಿ ನಿಯಂತ್ರಣ ಮೀರಿದಾಗ ಪೊಲೀಸರು ಗೋಳಿಬಾರ್ ನಡೆಸಿದ್ದು, ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಜಿಲ್ಲಾಡಳಿತವು ಕಟ್ಟೆಚ್ಚರವನ್ನು ವಹಿಸಿದೆ ಎಂದರು.
ಘಟನೆಯ ಸಂದರ್ಭದಲ್ಲಿ ನವಡಾ ಲೋಕಸಭಾ ಕ್ಷೇತ್ರದ ಸದಸ್ಯರಾಗಿರುವ ಕೇಂದ್ರ ಸಚಿವ ಗಿರಿರಾಜ ಸಿಂಗ್ ಅವರು ಪಟ್ಟಣದಲ್ಲಿ ಉಪಸ್ಥಿತರಿದ್ದರು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅವರು ಶಾಂತಿ ಮತ್ತು ಸೌಹಾರ್ದತೆ ಕಾಯ್ದುಕೊಳ್ಳುವಂತೆ ಜನರಲ್ಲಿ ಮನವಿ ಮಾಡಿಕೊಂಡರು ಎಂದು ಅವರು ತಿಳಿಸಿದರು.
2013ರಲ್ಲಿ ರಸ್ತೆಬದಿಯ ಕ್ಯಾಂಟೀನ್‌ನಲ್ಲಿಯ ಖಾದ್ಯಗಳ ಕುರಿತಂತೆ ನವಡಾದಲ್ಲಿ ಕನ್ವರಿಯಾಗಳು (ಹಿಂದು ಯಾತ್ರಿಗಳು) ಮತ್ತು ಇನ್ನೊಂದು ಸಮುದಾಯದ ನಡುವೆ ವಿವಾದವುಂಟಾಗಿ ಕೋಮು ಉದ್ವಿಗ್ನತೆ ಸೃಷ್ಟಿಯಾಗಿತ್ತು.