ಮಂಗಳೂರು: ಉರ್ವ ಪೊಲೀಸ್ ಠಾಣಾ ಎಎಸ್‌ಐ ಮೇಲೆ ಹಲ್ಲೆ

ಮಂಗಳೂರು, ಎ.5: ಉರ್ವ ಪೊಲೀಸ್ ಠಾಣೆಯ ಎಎಸ್‌ಐ ಐತಪ್ಪ ಎಂಬವರ ಮೇಲೆ ಇಂದು ಮುಂಜಾನೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡಿರುವ ಐತಪ್ಪರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬುಧವಾರ ಮುಂಜಾನೆ ಸುಮಾರು 3:30ಕ್ಕೆ ನಗರದ ಲೇಡಿಹಿಲ್ ಸರ್ಕಲ್ ಬಳಿ ಕರ್ತವ್ಯ ನಿರತರಾಗಿದ್ದ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಇಬ್ಬರು ದುಷ್ಕರ್ಮಿಗಳು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಗೀಡಾದ ಐತಪ್ಪರ ತಲೆಯಿಂದ ರಕ್ತ ಸುರಿದಿದ್ದು, ಕಣ್ಣಿನ ಭಾಗಕ್ಕೆ ಏಟು ಬಿದ್ದಿದೆ. ಗಂಭೀರ ಗಾಯಗೊಂಡ ಅವರನ್ನು ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಮಂಗಳೂರು ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್, ಡಿಸಿಪಿ ಡಾ.ಸಂಜೀವ್ ಪಾಟೀಲ್, ಎಸಿಪಿ ಉದಯ ನಾಯಕ್ ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಆಸ್ಪತ್ರೆಗೆ ತೆರಳಿ ಐತಪ್ಪ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ.
ಮೂರು ತಂಡ ರಚನೆ:
ಆರೋಪಿಗಳ ಪತ್ತೆಗಾಗಿ ಎಸಿಪಿ ಉದಯ ನಾಯಕ್ ನೇತೃತ್ವ ಮೂರು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







