ಗಡಿವಿವಾದ ಮಧ್ಯಸ್ಥಿಕೆ: ಅಮೆರಿಕ ಪ್ರಸ್ತಾವಕ್ಕೆ ಭಾರತ ತಿರಸ್ಕಾರ

ಹೊಸದಿಲ್ಲಿ,ಎ.5: ಕಾಶ್ಮೀರ ವಿವಾದ ಸೇರಿದಂತೆ ಭಾರತ- ಪಾಕಿಸ್ತಾನ ನಡುವಿನ ಗಡಿ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೆರಿಕ ಮುಂದಿಟ್ಟಿರುವ ಪ್ರಸ್ತಾವವನ್ನು ಭಾರತ ಸ್ಪಷ್ಟವಾಗಿ ತಳ್ಳಿಹಾಕಿದೆ.
ವಿಶ್ವಸಂಸ್ಥೆಯಲ್ಲಿ ಅಮೆರಿಕ ರಾಯಭಾರಿಯಾಗಿರುವ ನಿಕ್ಕಿ ಹಾಲೆ ಮುಂದಿಟ್ಟಿದ್ದ ಪ್ರಸ್ತಾವ ತಿರಸ್ಕರಿಸಿದ ಭಾರತ, " ಉಪಖಂಡದ ಎರಡು ನೆರೆದೇಶಗಳ ಗಡಿವಿವಾದವನ್ನು ದ್ವಿಪಕ್ಷೀಯ ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳಲು ಸಾಧ್ಯ" ಎಂದು ಸ್ಪಷ್ಟಪಡಿಸಿದೆ.
"ಭಯೋತ್ಪಾದನೆ ಮತ್ತು ಹಿಂಸೆಮುಕ್ತ ವಾತಾವರಣದಲ್ಲಿ ದ್ವಿಪಕ್ಷೀಯ ಮಾತುಕತೆ ಮೂಲಕವೇ ವಿವಾದ ಬಗೆಹರಿಸಿಕೊಳ್ಳಬೇಕು ಎಂಬ ಭಾರತದ ನಿಲುವಿನಲ್ಲಿ ಯಾವ ಬದಲಾವಣೆಯೂ ಇಲ್ಲ" ಎಂದು ಭಾರತ ಹೇಳಿದೆ.
ಒಂದು ವೇಳೆ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಪರಿಸ್ಥಿತಿ ಬಂದರೆ, ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಮತ್ತು ಅಂತಾರಾಷ್ಟ್ರೀಯ ರೂಢಿಗೆ ಅನುಗುಣವಾಗಿ ಕಾನೂನು ಹಾಗೂ ಸುವ್ಯವಸ್ಥೆಗೆ ಆದ್ಯತೆ ನೀಡಬೇಕು. ಅಂತಾರಾಷ್ಟ್ರೀಯ ಸಮುದಾಯದಿಂದ ನಾವು ನಿರೀಕ್ಷಿಸುವುದು, ಭಯೋತ್ಪಾದನೆ ತಡೆಯ ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳುವುದನ್ನು" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಗೋಪಾಲ್ ಬಗ್ಲೆ ಸ್ಪಷ್ಟಪಡಿಸಿದ್ದಾರೆ.
"ಗಡಿ ವಿವಾದ ಇತ್ಯರ್ಥದಲ್ಲಿ ಭಾರತ ಮೂರನೇ ದೇಶದ ಮಧ್ಯಸ್ಥಿಕೆಯ ಪ್ರಸ್ತಾವವೇ ಭಾರತಕ್ಕೆ ಕಿರಿಕಿರಿ ತರುವಂಥದ್ದು" ಎಂದು ಹೇಳಿದ್ದಾರೆ. "ಗಡಿಯಲ್ಲಿ ಸಂಘರ್ಷ ಹಾಗೂ ಉದ್ವಿಗ್ನತೆ ಹೆಚ್ಚುತ್ತಿದ್ದು, ನಾವು ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಕೊಡುಗೆ ನೀಡಬಹುದೇ ಎಂಬ ಬಗ್ಗೆ ಚಿಂತಿಸುತ್ತಿದ್ದೇವೆ" ಎಂದು ನಿಕ್ಕಿ ಹಾಲೆ ಹೇಳಿದ್ದರು.