ಜಿದ್ದಾ: ಮಂಗಳೂರು ಪೊಲೀಸ್ ದೌರ್ಜನ್ಯಕ್ಕೆ ಐಎಸ್‌ಎಫ್ ಖಂಡನೆ : ಎ.5ರಂದು ಸಭೆ
ಜಿದ್ದಾ, ಎ. 5: ಮಂಗಳೂರಿನಲ್ಲಿ ಅಮಾಯಕರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ಮತ್ತು ಅದನ್ನು ವಿರೋಧಿಸಿ ಪ್ರತಿಭಟಿಸಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಹಾಗೂ ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ಕಾರ್ಯಕರ್ತರ ಅಕ್ರಮ ಬಂಧನವನ್ನು ಇಂಡಿಯಾ ಸೋಶಿಯಲ್ ಫಾರಂ, ಜಿದ್ದಾ, ಕರ್ನಾಟಕ ಪಶ್ಚಿಮ ವಲಯವು ತೀವ್ರವಾಗಿ ಖಂಡಿಸುತ್ತದೆ. ಪೊಲೀಸ್ ದೌರ್ಜನ್ಯಕ್ಕೆ ತುತ್ತಾಗಿರುವ ಯುವಕರಿಗೆ ಸರಕಾರ ಪರಿಹಾರವನ್ನು ನೀಡಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಇಂಡಿಯಾ ಸೋಶಿಯಲ್ ಫಾರಂ ಆಗ್ರಹಿಸಿದೆ. ಪೊಲೀಸರ ಈ ರೀತಿಯ ನಿರಂಕುಶ ಪ್ರವೃತ್ತಿಯು ಭಾರತವನ್ನು ಹೊರಗಿನಿಂದ ನೋಡುವವರಿಗೆ ಇದು ಪ್ರಜಾಪ್ರಭುತ್ವ ರಾಷ್ಟ್ರ ಹೌದೇ ಎಂಬ ಅನುಮಾನವನ್ನು ಹುಟ್ಟಿಸುವಂತಿದೆ. ಈ ಸನ್ನಿವೇಶದಲ್ಲಿ ಮಂಗಳೂರು ಪೊಲೀಸರ ದೌರ್ಜನ್ಯದ ವಿರುದ್ಧದ ಪ್ರಗತಿಪರ ಸಂಘಟನೆಗಳ ಹೋರಾಟವನ್ನು ಬೆಂಬಲಿಸಿ ಐಎಸ್‌ಎಫ್ ವತಿಯಿಂದ ಎಪ್ರಿಲ್ 5, 2017ರಂದು ಸಂಜೆ ಜಿದ್ದಾದಲ್ಲಿ ಅನಿವಾಸಿ ಭಾರತೀಯರ ಸಭೆ ನಡೆಸಲು ಉದ್ದೇಶಿಸಲಾಗಿದೆ. ಮಧ್ಯ ರಾತ್ರಿಯ ವೇಳೆ ಮನೆಯ ಬಾಗಿಲೊಡೆದು ಒಳನುಗ್ಗಿ ಯುವಕರನ್ನು ಕೊಂಡೊಯ್ದು ಆರು ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟು ಚಿತ್ರಹಿಂಸೆ ನೀಡುವ ಮೂಲಕ ಮಂಗಳೂರು ಸಿಸಿಬಿ ಪೊಲೀಸರು ಯಾವುದೇ ಕ್ರಿಮಿನಲ್‌ಗಳಿಗಿಂತಲೂ ಕೀಳಾಗಿ ವರ್ತಿಸಿದ್ದಾರೆ. ಈ ಹಿಂದೆಯೂ ಮಂಗಳೂರು ಪೊಲೀಸರು ಇಂತಹ ದೌರ್ಜನ್ಯಗಳನ್ನು ನಡೆಸಿದ ದಾಖಲೆಗಳಿವೆ. ಯಾವುದೇ ಸಣಪುಟ್ಟ ಕಲಹಗಳು ಸಂಭವಿಸಿದಾಗಲೂ ಅಲ್ಪಸಂಖ್ಯಾತರ ಮನೆಗಳ ಬಾಗಿಲೊಡೆದು ನುಗ್ಗುವುದು, ದನ ಸಾಗಾಟ ಹಾಗೂ ಅಂತಾರ್ಜಾತಿ ವಿವಾಹಗಳ ನೆಪದಲ್ಲಿ ಮುಸ್ಲಿಮರು ಮತ್ತು ದಲಿತರ ಮೇಲೆ ದೌರ್ಜನ್ಯ ಎಸಗುವುದು, ಕೋಮುವಾದದ ವಿರುದ್ಧ ಧ್ವನಿಯೆತ್ತುವ ಪತ್ರಕರ್ತರ ಮೇಲೆ ಸುಳ್ಳು ಕೇಸು ದಾಖಲಿಸುವುದು, ಆದಿವಾಸಿಗಳ ಪರವಾಗಿ ಧ್ವನಿಯೆತ್ತುವವರ ಪೀಡನೆ, ಪೊಲೀಸ್ ದೌರ್ಜನ್ಯದ ವಿರುದ್ಧ ಹೋರಾಡುವ ಮಾನವ ಹಕ್ಕು ಹೋರಾಟಗಾರರಿಗೆ ಬೆದರಿಕೆ ಇವೆಲ್ಲವೂ ಕರ್ನಾಟಕದ ಕರಾವಳಿ ಭಾಗದಲ್ಲಿ ಸಹಜವಾಗಿದೆ. ಈ ಸನ್ನಿವೇಶದಲ್ಲಿ ಪೊಲೀಸ್ ದೌರ್ಜನ್ಯ ವಿರುದ್ಧ ಐಕ್ಯತೆಯ ಧ್ವನಿ ಮೊಳಗಿರುವುದು ಸಕಾರಾತ್ಮಕವಾಗಿದೆ. ಸ್ಥಳೀಯ ಸಚಿವರಾದ ರಮನಾಥ ರೈ ಮತ್ತು ಯುಟಿ ಖಾದರ್‌ರವರು ಈ ವಿಷಯದಲ್ಲಿ ಹಸ್ತಕ್ಷೇಪ ನಡೆಸಬೇಕು. ದೌರ್ಜನ್ಯದಲ್ಲಿ ಕಿಡ್ನಿ ವೈಫಲ್ಯಗೊಂಡ ಯುವಕನಿಗೆ ಸರಕಾರದ ಪರಿಹಾರ ಒದಗಿಸಲು ಮತ್ತು ಕರಾವಳಿ ಭಾಗದಲ್ಲಿ ನಡೆಯುವ ದೌರ್ಜನ್ಯದ ಕುರಿತು ಸರಕಾರದ ಗಮನ ಸೆಳೆಯಲು ಪ್ರಯತ್ನಿಸುವ ಮೂಲಕ ತಮ್ಮ ಜವಾಬ್ದಾರಿಯನ್ನು ಪೂರೈಸಬೇಕು ಎಂದು ಐಎಸ್‌ಎಫ್ ಆಗ್ರಹಿಸುತ್ತದೆ ಎಂದು ಇಂಡಿಯಾ ಸೋಶಿಯಲ್ ಫಾರಂ ಕರ್ನಾಟಕ ಪಶ್ಚಿಮ ವಲಯ, ಸೌದಿ ಅರೇಬಿಯಾ ಇದರ ಅಧ್ಯಕ್ಷ ಮುಹಮ್ಮದ್ ಇಸ್ಮಾಯೀಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





