ಪೊಲೀಸ್ ದೌರ್ಜನ್ಯ: ಮುಸ್ಲಿಂ ಜಮಾಅತ್ ಕೌನ್ಸಿಲ್ ಖಂಡನೆ
ಮಂಗಳೂರು, ಎ. 5: ಕೊಲೆಯತ್ನ ಪ್ರಕರಣದಲ್ಲಿ ಬಂಧಿಯಾದ ಯುವಕನನ್ನು ವಿಚಾರಣೆಯ ನೆಪದಲ್ಲಿ ಆತನ ಕಿಡ್ನಿ ವೈಫಲ್ಯವಾಗುವವರೆಗೆ ನಿರಂತರ ಒಂದು ವಾರ ಕಾಲ ಅಮಾನವೀಯವಾಗಿ ಶಿಕ್ಷಿಸಿ ಅದನ್ನು ಪ್ರತಿಭಟಿಸಿದಾಗ ಬಲಪ್ರಯೋಗಿಸಿ ದೌರ್ಜನ್ಯವೆಸಗಿರುವ ಅಧಿಕಾರಿಗಳ ವರ್ತನೆ ಖಂಡನೀಯವಾಗಿದ್ದು, ತಪ್ಪಿತಸ್ಥ ಅಧಿಕಾರಿಯ ವಿರುದ್ಧ ರಾಜ್ಯ ಸರಕಾರ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಮುಸ್ಲಿಂ ಜಮಾಅತ್ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಅಬೂಸುಫ್ಯಾನ್ ಎಚ್.ಐ. ಇಬ್ರಾಹೀಂ ಮದನಿ ಆಗ್ರಹಿಸಿದ್ದಾರೆ.ಬಂಧಿತ ಯುವಕರು ಅಪರಾಧಿಗಳಾಗಿದ್ದಲ್ಲಿ ಕಾನೂನು ರೀತಿಯ ಕ್ರಮ ಕೈಗೊಂಡು ಶಿಕ್ಷಿಸಬೇಕು. ಅದಲ್ಲದೆ ಅವರ ಮೇಲೆ ಅಮಾನವೀಯವಾಗಿ ವರ್ತಿಸುವುದು, ದೌರ್ಜನ್ಯವೆಸಗುವುದು ಅಲ್ಪಸಂಖ್ಯಾತರಲ್ಲಿ ಅಭದ್ರತಾ ಭಾವ ಬೆಳೆಯುವ ಹಾಗೂ ಈ ಹೆಸರಿನಲ್ಲಿ ಇನ್ನಷ್ಟು ಅಪರಾಧಿಗಳು ಸೃಷ್ಟಿಯಾಗುವ ಅಪಾಯವಿದೆ. ಆದ್ದರಿಂದ ನಾಡಿನ ಶಾಂತಿಯನ್ನು ಕದಡುವ ಈ ರೀತಿಯ ದೌರ್ಜನ್ಯಗಳು ಕೊನೆಗೊಳ್ಳಬೇಕಾಗಿದೆ ಎಂದು ಅಬೂಸುಫ್ಯಾನ್ ಎಚ್.ಐ. ಇಬ್ರಾಹೀಂ ಮದನಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





