ಪೊಲೀಸ್ ಇಲಾಖೆಗೆ 15 ದಿನಗಳ ಗಡುವು: ಕಾಂಗ್ರೆಸ್ ಸಭೆಯಲ್ಲಿ ನಿರ್ಣಯ
ಯುವಕನ ಮೇಲೆ ಪೊಲೀಸ್ ದೌರ್ಜನ್ಯ ಪ್ರಕರಣ

ಮಂಗಳೂರು, ಎ. 5: ಅಹ್ಮದ್ ಖುರೇಶಿ ಎಂಬಾತನ ಮೇಲೆ ಸಿಸಿಬಿ ಪೊಲೀಸರು ನಡೆಸಿರುವ ದೌರ್ಜನ್ಯ ಹಾಗೂ ಪ್ರತಿಭಟನಕಾರರ ಮೇಲಿನ ಲಾಠಿ ಪ್ರಹಾರವನ್ನು ಖಂಡಿಸಿ ಬುಧವಾರ ನಗರದ ಬಂದರ್‌ನ ಝೀನತ್ ಬಕ್ಷ್ ಸಭಾಂಗಣದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರ ಹಾಗೂ ಕಾರ್ಯಕರ್ತರ ಸಭೆ ನಡೆಯಿತು.
ಸಭೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಕಾಂಗ್ರೆಸ್‌ನ ಕಾರ್ಪೊರೇಟರ್‌ಗಳು, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಸದಸ್ಯರ ಸಹಿತ ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
ಪೊಲೀಸ್ ಇಲಾಖೆಗೆ 15 ದಿನಗಳ ಗಡುವು:
ಪೊಲೀಸ್ ದೌರ್ಜನ್ಯದಿಂದ ಕಿಡ್ನಿಯನ್ನು ಕಳೆದುಕೊಂಡಿರುವ ಅಹ್ಮದ್ ಖುರೇಶಿಗೆ ಪರಿಹಾರವನ್ನು ಕಲ್ಪಿಸಬೇಕು. ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಸರಕಾರ ಭರಿಸಬೇಕು. ದೌರ್ಜನ್ಯ ಎಸಗಿರುವ ಸಿಸಿಬಿ ಪೊಲೀಸರನ್ನು ಅಮಾನತುಗೊಳಿಸಬೇಕು. ಈಗಿರುವ ಸಿಸಿಬಿ ತಂಡವನ್ನು ಬರ್ಕಾಸ್ತುಗೊಳಿಸಿ ತಂಡಕ್ಕೆ ಹೊಸಬರ ನೇಮಕ ಮಾಡಬೇಕು. ಘಟನೆಗೆ ಕಾರಣರಾಗಿರುವ ಪೊಲೀಸ್ ಕಮಿಷನರ್ ಎಂ.ಚಂದ್ರಶೇಖರ್ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು. 15 ದಿನಗಳೊಳಗೆ ನಮ್ಮ ಬೇಡಿಕೆಗಳು ಈಡೇರಬೇಕು. ಒಂದು ವೇಳೆ ಬೇಡಿಕೆಗಳು ಈಡೇರದಿದ್ದರೆ, ಮತ್ತೆ ಸಭೆ ಕರೆದು ಮುಂದಿನ ಹೋರಾಟದ ಬಗ್ಗೆ ರೂಪುರೇಶೆಗಳನ್ನು ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮೇಯರ್ ಅಶ್ರಫ್ ತಿಳಿಸಿದ್ದಾರೆ.
ಸಿಸಿಬಿ ತಂಡದಲ್ಲಿ ಈಗಿರುವ ಹೆಚ್ಚಿನ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಳೆದ 10ರಿಂದ 15 ವರ್ಷಗಳಿಂದ ಸೇವೆಯಲ್ಲಿದ್ದು, ಇವರಿಂದ ನ್ಯಾಯ ಸಿಗ್ತಾ ಇಲ್ಲ. ಆದ್ದರಿಂದ ಈ ತಂಡವನ್ನು ಕೂಡಲೇ ಬರ್ಕಾಸ್ತುಗೊಳಿಸಬೇಕು. ಸಿಸಿಬಿಗೆ ಹೊಸಬರನ್ನು ನೇಮಕ ಮಾಡಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಂಡಿರುವುದಾಗಿ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಅಲ್ಪಸಂಖ್ಯಾತರ ವಿರುದ್ಧ ದಬ್ಬಾಳಿಕೆಗಳು ನಡೆಯುತ್ತಲೇ ಬಂದಿದೆ. ನ್ಯಾಯ ಕೇಳಲು ಹೋದರೆ ದಬ್ಬಾಳಿಕೆ ಮಾಡಲಾಗುತ್ತಿದೆ. ಅಲ್ಪಸಂಖ್ಯಾತರ ಹಕ್ಕುಗಳಿಗೆ ಮಾನ್ಯತೆ ಇಲ್ಲದಂತಾಗಿದೆ. ಆದ್ದರಿಂದ ಬೇಡಿಕೆಗಳು ಈಡೇರದಿದದರೆ ಹೋರಾಟದಿಂದ ಹಿಂಜರಿಯುವ ಪ್ರಶ್ನೆ ಇಲ್ಲ ಎಂದು ಅಶ್ರಫ್ ತಿಳಿಸಿದರು.
ಸದಸ್ಯರ ನಡುವೆ ಮಾತಿನ ಚಕಮಕಿ:
ಪ್ರತಿಭಟನನಿರತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸುವ ವಿಷಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ತಿಳಿದಿರಲಿಲ್ಲವೇ ಎಂದು ಸಭೆಯಲ್ಲಿ ಸದಸ್ಯರೊಬ್ಬರು ಮಾತನಾಡಿದಾಗ ಇನ್ನೊಬ್ಬ ಸದಸ್ಯರು ಧ್ವನಿಗೂಡಿಸಿ ಇಲ್ಲಿ ರಾಜಕೀಯ ನಾಯಕರ ಬಗ್ಗೆ ಮಾತನಾಡಬೇಡಿ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅದೇ ಸದಸ್ಯರು ನಾನು ಯಾರಿಗೂ ದೂರಿ ಮಾತನಾಡುತ್ತಿಲ್ಲ. ಇದ್ದ ವಿಷಯವನ್ನು ಹೇಳುತ್ತಿದ್ದೇನೆ ಎಂದರು. ಬಿ.ಇಬ್ರಾಹೀಂ ಅವರು ಮಾತನಾಡಿ, ಇಲ್ಲಿ ಸಮುದಾಯಕ್ಕಾಗಿರುವ ಅನ್ಯಾಯದ ಬಗ್ಗೆ ಚರ್ಚಿಸಲು ಹಾಗೂ ಕಾಂಗ್ರೆಸ್ ಅಲ್ಪಸಂಖ್ಯಾತರಲ್ಲಿ ಆ ಬಗ್ಗೆ ಅಭಿಪ್ರಾಯ ಕೇಳಲು ಸಭೆ ಕರೆದಿದ್ದಾರೆ. ನಮ್ಮದೇ ಸರಕಾರ ಇರುವಾಗ ನಾವೆಲ್ಲ ಒಗ್ಗಟ್ಟಾಗಿ ಈ ಬಗ್ಗೆ ಯಾಕೆ ಸರಕಾರದ ಗಮನ ಸಳೆಯಬಾರದು ಎಂದರು.
ಸಭೆಯಲ್ಲಿ ಮಾಜಿ ಸಂಸದ ಬಿ.ಇಬ್ರಾಹೀಂ, ಮಾಜಿ ಶಾಸಕ ಕೆ.ಎಸ್.ಎಂ.ಮಸೂದ್, ಜಿಲ್ಲಾ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಸುಹೇಲ್ ಕಂದಕ್, ಜಿಲ್ಲಾ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ತಾ.ಪಂ. ಸದಸ್ಯ ಸಮದ್, ಕಾಂಗ್ರೆಸ್ ಮುಖಂಡರಾದ ಮುಸ್ತಫಾ ಕೆಂಪಿ, ಅಹ್ಮದ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.







