ಎಷ್ಟು ಹಿಂದೂಗಳಿಗೆ ಮುಸ್ಲಿಂ ಆಪ್ತ ಮಿತ್ರರಿದ್ದಾರೆ ? ಎಷ್ಟು ಮುಸ್ಲಿಮರಿಗೆ ಹಿಂದೂ ಆಪ್ತ ಮಿತ್ರರಿದ್ದಾರೆ ?
ಅತ್ಯಂತ ಕುತೂಹಲಕಾರಿ ಮಾಹಿತಿ

ಹೊಸದಿಲ್ಲಿ,ಎ.5 : ಶೇ. 91ರಷ್ಟು ಹಿಂದುಗಳಿಗೆ ತಮ್ಮ ಧರ್ಮದವರೇ ಆದ ಆತ್ಮೀಯ ಗೆಳೆಯರಿದ್ದರೆ, ಕೇವಲ ಶೇ. 33ರಷ್ಟು ಹಿಂದೂಗಳು ಮುಸ್ಲಿಮನೊಬ್ಬನನ್ನು ಆತ್ಮೀಯ ಗೆಳೆಯನಾಗಿ ಹೊಂದಿದ್ದಾರೆಂದು ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲೆಪಿಂಗ್ ಸೊಸೈಟೀಸ್ ಅಧ್ಯಯನವೊಂದರಿಂದ ತಿಳಿದು ಬಂದಿದೆ. ಆದರೆ ಶೇ.74ರಷ್ಟು ಮುಸ್ಲಿಮರ ಆತ್ಮೀಯ ಸ್ನೇಹಿತನೊಬ್ಬ ಹಿಂದೂ ಆಗಿದ್ದರೆ, ಶೇ. 95 ರಷ್ಟು ಮಂದಿಗೆ ತಮ್ಮದೇ ಸಮುದಾಯದ ಆತ್ಮೀಯ ಸ್ನೇಹಿತರಿದ್ದಾರೆಂದೂ ಈ ಅಧ್ಯಯನ ತಿಳಿಸಿದೆ.
ಸ್ನೇಹ ಸಂಬಂಧಗಳನ್ನು ಬೆಳೆಸುವಲ್ಲಿಯೂ ಜನರು ಧರ್ಮವನ್ನು ಪರಿಗಣಿಸುತ್ತಾರೆಂಬುದು ಇದರಿಂದ ತಿಳಿಯುತ್ತದೆಯಲ್ಲದೆ ಜನರು ತಾವು ನಂಬಿಕೆಯಿರಿಸಬಹುದಾದವರ ಧರ್ಮವನ್ನೂ ಪರಿಗಣನೆಗೆ ತೆಗೆದುಕೊಳ್ಳುತ್ತಾರೆಂಬುದು ಸ್ಪಷ್ಟ.
‘ಸೊಸೈಟಿ ಎಂಡ್ ಪೊಲಿಟಿಕ್ಸ್ ಬಿಟ್ವೀನ್ ಇಲೆಕ್ಷನ್ಸ್’ ಎಂಬ ವಿಷಯದ ಮೇಲೆ ನಡೆಸಲಾದ ಈ ಅಧ್ಯಯನದಲ್ಲಿ ಗುಜರಾತ್, ಹರ್ಯಾಣ, ಕರ್ನಾಟಕ ಹಾಗೂ ಒಡಿಶಾಗಳಲ್ಲಿ ಮುಸ್ಲಿಮರನ್ನು ಪ್ರತ್ಯೇಕಿಸಲಾಗಿರುವುದನ್ನೂ ಬೊಟ್ಟು ಮಾಡಿ ತೋರಿಸಲಾಗಿದೆ.
ಮುಸ್ಲಿಮರು ಅತಿಯಾದ ದೇಶಭಕ್ತರು ಎಂದು ಕೇವಲ ಶೇ.13ರಷ್ಟು ಹಿಂದೂಗಳು ತಿಳಿದಿದ್ದರೆ ಶೇ.20ರಷ್ಟು ಹಿಂದೂಗಳು ಕ್ರೈಸ್ತರನ್ನು ಹಾಗೂ ಶೇ.47ರಷ್ಟು ಹಿಂದೂಗಳು ಸಿಕ್ಖರನ್ನು ದೇಶಭಕ್ತರೆಂದು ತಿಳಿದಿದ್ದಾರೆ.
ಕನಿಷ್ಠ ಶೇ. 77ರಷ್ಟು ಮುಸ್ಲಿಮರು ತಮ್ಮ ಸಮುದಾಯ ಅತಿಯಾದ ದೇಶಭಕ್ತಿ ಹೊಂದಿದೆ ಎಂದು ನಂಬಿದ್ದರೆ ಶೇ.26ರಷ್ಟು ಕ್ರೈಸ್ತರು ಮುಸ್ಲಿಮರು ದೇಶಭಕ್ತರೆಂದು ತಿಳಿಯುತ್ತಾರೆಂದು ಅಧ್ಯಯನ ತಿಳಿಸಿದೆ.
ಕುತೂಹಲಕಾರಿ ವಿಚಾರವೆಂದರೆ ಕೇವಲ ಶೇ. 66ರಷ್ಟು ಸಿಕ್ಖರು ಹಿಂದುಗಳನ್ನು ಅತಿಯಾಧ ದೇಶಭಕ್ತರೆಂದು ತಿಳಿಯುತ್ತಾರೆ.
ಗೋವುಗಳಿಗೆ ಗೌರವ ತೋರದವರನ್ನು ಶಿಕ್ಷಿಸಬೇಕೇ ? ಸಾರ್ವಜನಿಕ ಸಮಾರಂಭಗಳಲ್ಲಿ ಭಾರತ್ ಮಾತಾ ಕಿ ಜೈ ಹೇಳಬೇಡಿ, ರಾಷ್ಟ್ರಗೀತೆಯನ್ನು ನುಡಿಸುವಾಗ ನಿಲ್ಲಬೇಡಿ ಅಥವಾ ಮತಾಂತರಗಳಲ್ಲಿ ತೊಡಗಿ ಮುಂತಾದ ವಿಚಾರಗಳಿಗೆ ನೀಡಿದ ಉತ್ತರದ ಅನುಸಾರವಾಗಿ ಜನರನ್ನು ಉದಾರವಾದಿಗಳು ಅಥವಾ ಬಹುಸಂಖ್ಯಾವಾದಿಗಳು ಎಂದು ಗುರುತಿಸಲಾಯಿತಲ್ಲದೆ ಶೇ. 72ರಷ್ಟು ಮಂದಿ ಕೊನೆಯ ವಿಭಾಗಕ್ಕೆ ಸೇರಿದರೆ, ಶೇ. 17ರಷ್ಟು ಮಂದಿ ದುರ್ಬಲ ವಿಚಾರವಾದಿಗಳಾಗಿದ್ದರೆ, ಶೇ. 6ರಷ್ಟು ಮಂದಿ ಉದಾರವಾದಿಗಳಾಗಿದ್ದರು ಎಂದು ಅಧ್ಯಯನದಿಂದ ತಿಳಿದು ಬಂದಿದೆ.
ಅದೇ ಸಮಯ ಸೇನೆಯು ಜನರ ಅತ್ಯಂತ ಹೆಚ್ಚು ವಿಶ್ವಾಸ ಸಂಪಾದಿಸಿದ್ದರೆ, ಪೊಲೀಸರು, ರಾಜಕೀಯ ಪಕ್ಷಗಳು ಮತ್ತು ಸರಕಾರಿ ಅಧಿಕಾರಿಗಳು ಕನಿಷ್ಠ ವಿಶ್ವಾಸ ಸಂಪಾದಿಸಿದವರಾಗಿದ್ದಾರೆಂದು ಈ ಅಧ್ಯಯನ ಕಂಡುಕೊಂಡಿದೆ.







