ರಾಮನವಮಿ ಶೋಭಾ ಯಾತ್ರೆ; ಟ್ರಕ್ ಹರಿದು ಮೂವರ ಸಾವು

ಜಲಂಧರ್, ಎ.5: ರಾಮನವಮಿಯ ಅಂಗವಾಗಿ ಶೋಭಾಯಾತ್ರೆಯ ವೇಳೆ ಟ್ರಕ್ ಹರಿದು ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಮೃತಪಟ್ಟು ಹದಿನಾರು ಮಂದಿ ಗಾಯಗೊಂಡಿರುವ ಘಟನೆ ಜಲಂಧರ್ ನಲ್ಲಿ ಮಂಗಳವಾರ ಸಂಭವಿಸಿದೆ.
ಗೋವಿಂದ ನಗರ ನಿವಾಸಿ ಕುಸುಮ್ ಗಿಲ್ ಮತ್ತು ವಿನ್ನಿ ರಜಪೂತ್ ಮೃತ ಮಹಿಳೆಯರು. ಮೃತಪಟ್ಟ ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ.
ಗಾಯಗೊಂಡವರ ಪೈಕಿ ನಾಲ್ವರು ಮಕ್ಕಳು ಸೇರಿದಂತೆ ಏಳು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಅವರೆಲ್ಲ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶೋಭಾಯಾತ್ರೆಯ ವೇಳೆ ಟ್ರಕ್ ಚಲಾಯಿಸುತ್ತಿದ್ದ ಅನನುಭವಿ ಚಾಲಕ ಅಮಿತ್ ಬ್ರೇಕ್ ಬದಲಿಗೆ ಆಕ್ಸಿಲೇಟರ್ ನ್ನು ಒತ್ತಿದ ಪರಿಣಾಮವಾಗಿ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಒಮ್ಮೆಲೆ ಮುಂದಕ್ಕೆ ಹಾರಿದ ಪರಿಣಾಮವಾಗಿ ಎದುರಿನಿಂದ ಹಾದು ಹೋಗುತ್ತಿದ್ದ ಜನರ ಮೇಲೆ ಟ್ರಕ್ ಹರಿದು ಈ ದುರಂತ ಸಂಭವಿಸಿತು ಎನ್ನಲಾಗಿದೆ. ಟ್ರಕ್ ನ ಅಸಲಿ ಅಮಿತ್ ಗೆ ಚಾಲಕ ಗುರ್ಮಿತ್ ಸಿಂಗ್ ಟ್ರಕ್ ಚಲಾಯಿಸಲು ಅವಕಾಶ ಮಾಡಿಕೊಟ್ಟು ಟ್ರಕ್ ನ ಹಿಂದುಗಡೆ ಕುಳಿತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತಕ್ಕೆ ಕಾರಣನಾದ ಚಾಲಕ ಅಮಿತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ಧಾರೆ. ಈತನಲ್ಲಿ ವಾಹನ ಚಲಾಯಿಸಲು ಲೈಸೆನ್ಸ್ ಇರಲಿಲ್ಲ ಎಂಬ ವಿಚಾರ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.







