ಸಹಪಾಠಿಯನ್ನು ರಕ್ಷಿಸಲು ಮೊಸಳೆಯೊಂದಿಗೆ ಹೋರಾಡಿದ ಆರರ ಹರೆಯದ ಬಾಲಕಿ....!

ಕೇಂದ್ರಪಾಡಾ(ಒಡಿಶಾ),ಎ.5: ಕೇಂದ್ರಪಾಡಾ ಜಿಲ್ಲೆಯ ಬಂಕ್ವಾಲಾ ಗ್ರಾಮದಲ್ಲಿ ಆರರ ಹರೆಯದ ಬಾಲಕಿಯೋರ್ವಳು ಮೊಸಳೆಗೆ ಆಹಾರವಾಗಲಿದ್ದ ತನ್ನ ಸಹಪಾಠಿಯನ್ನು ರಕ್ಷಿಸುವ ಮೂಲಕ ಅಸೀಮ ಧೈರ್ಯ ಮೆರೆದಿದ್ದಾಳೆ.
ಕೂದಲೆಳೆಯ ಅಂತರದಿಂದ ಸಾವಿನ ದವಡೆಯಿಂದ ಪಾರಾಗಿರುವ, ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿರುವ ಬಸಂತಿ ದಲಾಯಿಯನ್ನು ಸರಕಾರಿ ಆಸ್ಪತೆಗೆ ದಾಖಲಿಸಲಾಗಿದೆ. ಆಕೆಯ ಕೈ ಮತ್ತು ತೊಡೆಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಬಸಂತಿ ಮತ್ತು ಆಕೆಯ ಸಹಪಾಠಿಯಾಗಿರುವ ಅದೇ ಗ್ರಾಮದ ಟಿಕಿ ದಲಾಯಿ ನಿನ್ನೆ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ನೀರಿನಿಂದ ಮೇಲಕ್ಕೆದ್ದು ಬಂದ ಭಾರೀ ಮೊಸಳೆ ಬಸಂತಿಯ ಮೇಲೆ ದಾಳಿ ಮಾಡಿತ್ತು. ಗೆಳತಿ ಸಾವಿನ ದವಡೆಯಲ್ಲಿ ಸಿಲುಕಿದ್ದರೂ ಟಿಕಿ ಧೈರ್ಯ ಕಳೆದುಕೊಂಡಿರಲಿಲ್ಲ. ಹತ್ತಿರದಲ್ಲಿಯೇ ಇದ್ದ ಬಿದಿರಿನ ತುಂಡನ್ನೆತ್ತಿಕೊಂಡು ಮೊಸಳೆಯ ತಲೆಗೆ ಬಲವಾಗಿ ಬಾರಿಸಿತೊಡಗಿದ್ದಳು.
ಈ ದಿಢೀರ್ ದಾಳಿಯಿಂದ ಕಂಗಾಲಾದ ಮೊಸಳೆ ಬಸಂತಿಯನ್ನು ಬಿಟ್ಟು ನೀರಿನಲ್ಲಿ ಜಾರಿಕೊಂಡಿತ್ತು. ಗಾಯಗೊಂಡಿದ್ದ ಬಸಂತಿಯನ್ನು ನೀರಿನಿಂದ ಹೊರಕ್ಕೆ ತಂದ ಟಿಕಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಅವರು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಟಿಕಿಯ ಧೈರ್ಯ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.