ಮಿಗ್ 29 ಹಾರಾಟ ನಡೆಸುವ ಪ್ರಪ್ರಥಮ ಭಾರತೀಯ ಮಹಿಳೆಯಾಗುವತ್ತ ಆಯಿಶಾ ಅಝೀಝ್ ಚಿತ್ತ

ಜಮ್ಮು, ಎ.5: ಕಳೆದ ವಾರ ಕಾಶ್ಮೀರದ ಯುವತಿ ಆಯಿಶಾ ಅಝೀಝ್‌ಗೆ ವಿಮಾನ ಹಾರಾಟದಲ್ಲಿ ಕಮರ್ಷಿಯಲ್ ಲೈಸನ್ಸ್ ದೊರೆತಾಗ ಪೈಲಟ್ ಆಗುವ ಆಕೆಯ ಕನಸು ನನಸಾಗಿದೆ. ಇದೀಗ ಈ 21 ವರ್ಷದ ಯುವತಿಗೆ ಮಿಗ್ 29 ಯುದ್ಧ ವಿಮಾನವನ್ನು ರಷ್ಯಾದ ಸೋಕುಲ್ ವಾಯು ನೆಲೆಯಿಂದ ಹಾರಾಟ ನಡೆಸುವ ಕನಸಿದೆ. ಇದು ಕೂಡ ನನಸಾದಲ್ಲಿ ಈ ಯುದ್ಧ ವಿಮಾನದ ಹಾರಾಟ ನಡೆಸಿದ ಅತ್ಯಂತ ಕಿರಿಯ ಭಾರತೀಯ ಯುವತಿ ಈಕೆಯಾಗಲಿದ್ದಾಳೆ.
"ಬಾಹ್ಯಾಕಾಶದ ತುದಿಯನ್ನು ತಲುಪುವ ಆಸೆ ನನ್ನದು. ಈ ನಿಟ್ಟಿನಲ್ಲಿ ಮಿಗ್-29 ಹಾರಾಟ ನಡೆಸಲು ರಷ್ಯಾದ ಏಜೆನ್ಸಿಗಳೊಂದಿಗೆ ಭಾರತ ಮಾತುಕತೆ ನಡೆಸುತ್ತಿದೆ" ಎನ್ನುತ್ತಾಳೆ ಆಯಿಶಾ. ನನ್ನ ಮುಂದಿನ ಗುರಿ -ಮಿಗ್ 29 ಫೈಟರ್ ಜೆಟ್ ಹಾರಾಟ ನಡೆಸುವುದು ಎಂದು ಆಕೆ ಆತ್ಮವಿಶ್ವಾಸದಿಂದ ಹೇಳುತ್ತಾಳೆ.
ಶಾಲೆಯಲ್ಲಿ ಕಲಿಯುತ್ತಿರುವಾಗಲೇ ವಿಮಾನ ಹಾರಾಟದಲ್ಲಿ ತರಬೇತಿ ಪಡೆದ ಆಕೆ 16 ವರ್ಷದವಳಿರುವಾಗಲೇ ಸ್ಟೂಡೆಂಟ್ ಪೈಲಟ್ ಲೈಸನ್ಸ್ ಅನ್ನು ಪ್ರತಿಷ್ಠಿತ ಬಾಂಬೆ ಫ್ಲೈಯಿಂಗ್ ಕ್ಲಬ್ಬಿನಿಂದ ಪಡೆದಿದ್ದಳು. 2012ರಲ್ಲಿ ನಾಸಾದಲ್ಲಿ ಎರಡು ತಿಂಗಳ ಅತ್ಯಾಧುನಿಕ ಬಾಹ್ಯಾಕಾಶ ತರಬೇತಿ ಕೋರ್ಸ್‌ನಲ್ಲೂ ಆಕೆ ಭಾಗವಹಿಸಿದ್ದಳು.
ಈ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದ ಮೂವರು ಭಾರತೀಯರಲ್ಲಿ ಆಕೆ ಒಬ್ಬಳಾಗಿದ್ಳು. ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ತನ್ನ ಸ್ಫೂರ್ತಿ ಎಂದು ಹೇಳುತ್ತಾಳೆ ಆಯಿಶಾ.ಈಕೆಯ ತಾಯಿ ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯವರಾದರೆ ತಂದೆ ಮಹಾರಾಷ್ಟ್ರದ ಮುಂಬೈಯವರು. ಆಕೆಯ ಸಾಧನೆಯ ಬಗ್ಗೆ ನನಗೆ ಹೆಮ್ಮೆಯಿದೆ. ಆಕೆ ಇನ್ನೂ ಎತ್ತರಕ್ಕೇರಬೇಕೆಂಬುದು ನಮ್ಮ ಆಸೆ. ಆಕೆ ನನಗೆ ಸ್ಫೂರ್ತಿ ಎನ್ನುತ್ತಾನೆ ಆಕೆಯ ಸಹೋದರ ಅರೀಬ್ ಲೋಖಂಡವಾಲ.ನಿಮ್ಮ ಕನಸುಗಳ ಬೆನ್ನತ್ತಿ, ಜೀವನದಲ್ಲಿ ದೊಡ್ಡ ಗುರಿಗಳನ್ನು ಹೊಂದಿ ಹಾಗೂ ಅವುಗಳನ್ನು ಸಾಧಿಸಿ ತೋರಿಸಿಎಂದು ಕಾಶ್ಮೀರಿ ಯುವತಿಯರಿಗೆ ಆಯಿಶಾ ಕರೆ ನೀಡುತ್ತಾಳೆ.







