ಮಧ್ಯಪ್ರದೇಶ:ಅಕ್ರಮ ಪಟಾಕಿ ತಯಾರಿಕೆ ಘಟಕದಲ್ಲಿ ಸ್ಫೋಟ-ಏಳು ಜನರ ಸಾವು,ಹಲವರಿಗೆ ಗಾಯ

ಭೋಪಾಲ,ಎ.5: ದಾತಿಯಾ ಜಿಲ್ಲೆಯ ಸಿಯೊಂಡಾ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಪಟಾಕಿ ತಯಾರಿಕೆ ಘಟಕದಲ್ಲಿ ಇಂದು ಭಾರೀ ಸ್ಫೋಟ ಸಂಭವಿಸಿದ್ದು, ಕನಿಷ್ಠ ಏಳು ಜನರು ಮೃತಪಟ್ಟಿದ್ದಾರೆ. ಹಲವಾರು ಜನರು ಗಾಯಗೊಂಡಿದ್ದಾರೆ.
ಸಿಯೊಂಡಾ ಗ್ರಾಮದ ಖಾಕಿ ಮೊಹಲ್ಲಾದ ನಿವಾಸಿ ರಶೀದ್ ಖಾನ್ ಎಂಬಾತನ ಮನೆಯಲ್ಲಿ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಈ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದವು.
ಸ್ಫೋಟದ ತೀವ್ರತೆಗೆ ಖಾನ್ ಮನೆ ಮತ್ತು ಆತನ ನೆರೆಮನೆ ಸಂಪೂರ್ಣವಾಗಿ ನೆಲಸಮಗೊಂಡಿವೆ.
ಈ ದುರಂತ ಸಂಭವಿಸಿದಾಗ ಆ ಮನೆಯ ಬಳಿಯಿಂದ ಹಾದು ಹೋಗುತ್ತಿದ್ದ ಕೆಲವರೂ ಸತ್ತವರಲ್ಲಿ ಸೇರಿದ್ದಾರೆ ಎನ್ನಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಜಿಲ್ಲಾಡಳಿತವು ಮೃತರ ಕುಟುಂಬಗಳಿಗೆ ತಲಾ ಎರಡು ಲ.ರೂ. ಮತ್ತು ಗಾಯಾಳುಗಳಿಗೆ ತಲಾ 50,000 ರೂ.ಪರಿಹಾರವನ್ನು ಪ್ರಕಟಿಸಿದೆ.
Next Story