ನಕಲಿ ಶೂ, ಚಪ್ಪಲಿ ಮಾರಾಟ...! ; ಓರ್ವನ ಬಂಧನ

ಬೆಂಗಳೂರು, ಎ.5: ಪ್ರತಿಷ್ಠಿತ ಕಂಪೆನಿಗಳ ಹೆಸರಿನಲ್ಲಿ ನಕಲಿ ಶೂ, ಚಪ್ಪಲಿಗಳನ್ನು ದಾಸ್ತಾನು ಮಾಡಿಕೊಂಡು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಓರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೇರಳ ಮೂಲದ ಅಬ್ದುಲ್ ಕರೀಂ(35) ಎಂದು ಗುರುತಿಸಲಾಗಿದ್ದು, ಈತ ನಗರದ ಓಕಳಿಪುರಂನಲ್ಲಿ ವಾಸವಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ನಗರದ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಗಾಂಧಿನಗರದ ಗ್ರಾಂಡ್ ಹಿಂದೂಸ್ತಾನ್ ಹೊಟೇಲ್‌ನಲ್ಲಿ ಪ್ರತಿಷ್ಠಿತ ಕಂಪೆನಿಗಳ ಹೆಸರಿನಲ್ಲಿ ನಕಲಿ ಶೂ, ಚಪ್ಪಲಿಗಳನ್ನು ದಾಸ್ತಾನು ಮಾಡಿಕೊಂಡು ಅವುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿ ಸಂಬಂಧಪಟ್ಟ ಕಂಪೆನಿಗಳಿಗೆ ನಷ್ಟವುಂಟು ಮಾಡುತ್ತಿರುತ್ತಾರೆಂಬ ಖಚಿತ ಮಾಹಿತಿ ಪಡೆದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಸಿಸಿಬಿ ತಿಳಿಸಿದೆ.
ಬಂಧಿತ ಆರೋಪಿಯಿಂದ 148 ಜೊತೆ ಶೂ, ಚಪ್ಪಲಿಗಳನ್ನು ವಶಕ್ಕೆ ಪಡೆದು ಇಲ್ಲಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.
Next Story





