ಏಡ್ಸ್ ರೋಗಿಯನ್ನು ಮನೆಯಿಂದ ಹೊರದಬ್ಬಿದ ತಂದೆ !

ಮುಝಫರ್‌ಪುರ(ಬಿಹಾರ),ಎ.5: ಜಿಲ್ಲೆಯ ಗೋಪಾಲಪುರ ಸರೌರಾದ ನಿವಾಸಿಯಾಗಿರುವ ಏಡ್ಸ್ ರೋಗಿಯೋರ್ವ ತನ್ನನ್ನು ಪತ್ನಿ ಮತ್ತು ಪುತ್ರಿಯರ ಸಹಿತ ಮನೆಯಿಂದ ಹೊರದಬ್ಬಿರುವ ತಂದೆಯ ವಿರುದ್ಧ ಬುಧವಾರ ಪೊಲೀಸ್ ದೂರು ದಾಖಲಿಸಿದ್ದಾನೆ.
ದೂರುದಾರ,ಆತನ ಪತ್ನಿ ಮತ್ತು ಮೂವರು ಪುತ್ರಿಯರನ್ನು ಮಂಗಳವಾರ ಸಂಜೆಯಿಂದ ಮನೆಯಿಂದ ಹೊರಗೆ ಹಾಕಲಾಗಿದ್ದು, ಆಗಿನಿಂದಲೂ ಅವರೆಲ್ಲ ಸ್ಥಳೀಯ ಪೊಲೀಸ್ ಠಾಣೆಯಲ್ಲಿಯೇ ಕುಳಿತಿದ್ದಾರೆ ಎಂದು ಡಿಎಸ್‌ಪಿ ಮುಷ್ತಫಿಕ್ ಅಹ್ಮದ್ ತಿಳಿಸಿದರು.
ಏಡ್ಸ್ ರೋಗಿಯು ಹೊರರಾಜ್ಯದಲ್ಲಿ ಗಾರೆ ಕೆಲಸಗಾರನಾಗಿ ದುಡಿಯುತ್ತಿದ್ದು, ಇತ್ತೀಚಿಗೆ ಮನೆಗೆ ಮರಳಿದ್ದ ಮತ್ತು ಮುಝಫರ್‌ಪುರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ ಎಂದು ತಿಳಿಸಿದ ಅವರು, ತನ್ನ ಪುತ್ರ ಸ್ವಂತ ಸೋದರಿಗೇ ಲೈಂಗಿಕ ಕಿರುಕುಳ ನೀಡುತ್ತಿದ್ದರಿಂದ ಅವನನ್ನು ಕುಟುಂಬಸಹಿತ ಮನೆಯಿಂದ ಹೊರದಬ್ಬಿದ್ದಾಗಿ ದೂರುದಾರನ ತಂದೆ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದರು.
ಅದು ನಿಜವಾಗಿದ್ದರೆ ತನ್ನ ಪತ್ನಿ ಮತ್ತು ಮೂವರು ಮಕ್ಕಳನ್ನೂ ಮನೆಯಿಂದ ಹೊರದಬ್ಬಿದ್ದೇಕೆ ಎಂದು ದೂರುದಾರ ಪ್ರಶ್ನಿಸಿದ್ದಾನೆ.
ಜಿಲ್ಲಾಡಳಿತ ಮತ್ತು ಜಿಲ್ಲಾ ಸರ್ಜನ್ ನೆರವಿನೊಂದಿಗೆ ಸಮಸ್ಯೆಗೆ ಪರಿಹಾ ಕಂಡುಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಅಹ್ಮದ್ ತಿಳಿಸಿದರು.
ನಾಲ್ಕು ದಿನಗಳ ಹಿಂದೆ ತಂದೆ ಈ ಕುಟುಂಬವನ್ನು ಮನೆಯಿಂದ ಹೊರಗೆ ಹಾಕಿದ್ದನಾದರೂ ವಿಷಯವು ಮುಷಾಹ್ರಿ ಪೊಲೀಸ್ ಠಾಣೆಯನ್ನು ತಲುಪಿದಾಗ ಅವರನ್ನು ವಾಪಸ್ ಮನೆಗೆ ಸೇರಿಸಿಕೊಂಡಿದ್ದ ಎಂದು ಅವರು ಹೇಳಿದರು.







