ಅಯೋಧ್ಯೆ: ನೂಕುನುಗ್ಗಲಿನಲ್ಲಿ ಓರ್ವ ಮಹಿಳೆ ಸಾವು

ಅಯೋಧ್ಯೆ,ಎ. 5: ಬುಧವಾರ ರಾಮನವಮಿ ಸಂದರ್ಭದಲ್ಲಿ ಸರಯೂ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ಲಕ್ಷಾಂತರ ಯಾತ್ರಿಗಳು ಅಯೋಧ್ಯೆಯಲ್ಲಿ ನೆರದಿದ್ದು, ನೂಕುನುಗ್ಗಲಿನ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಓರ್ವ ಮಹಿಳೆ ಮೃತಪಟ್ಟು, 12ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ಆದರೆ ಮಹಿಳೆ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ.
ಸರಯೂ ನದಿಯಲ್ಲಿ ಸ್ನಾನ ಮಾಡಲು ಮತ್ತು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿಲು ಬುಧವಾರ ನಸುಕಿನಿಂದಲೇ ಸುಮಾರು 10 ಲಕ್ಷ ಭಕ್ತರು ಈ ದೇವಸ್ಥಾನಗಳ ನಗರದಲ್ಲಿ ಸೇರತೊಡಗಿದ್ದರು.
ವಿವಾದಿತ ತಾಣದ ಮಂದಿರದ ಬಳಿ ಮೊದಲ ನೂಕುನುಗ್ಗಲಿನ ಘಟನೆ ನಡೆದಿದೆ. ಪೂಜೆ ಮುಗಿಸಿಕೊಂಡು ಮರಳುತ್ತಿದ್ದ ಸಿದ್ಧಾರ್ಥ ನಗರ ಜಿಲ್ಲೆಯ ನೌಗಾರ್ ನಿವಾಸಿ ದುಲಾರಿ ದೇವಿ (65) ಮತ್ತು ಆಕೆಯ ಪತಿ ಸಾಧುರಾಮ ನೂಕುನುಗ್ಗಲಿನಲ್ಲಿ ಸಿಕ್ಕಿದ್ದರು. ಈ ವೇಳೆ ದುಲಾರಿ ದೇವಿ ನೆಲಕ್ಕೆ ಬಿದ್ದಿದ್ದು ಜನರ ಕಾಲ್ತುಳಿತಕ್ಕೆ ಸಿಕ್ಕಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಆಕೆ ಆಸ್ಪತ್ರೆ ದಾರಿಯಲ್ಲಿ ಮೃತಪಟ್ಟರು. ಸುಲ್ತಾನಪುರ ಜಿಲ್ಲೆಯ ಲಖಪತಿ ದೇವಿ(70) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಂಧಾ ತಿರಾಹಾ ಪ್ರದೇಶದಲ್ಲಿ ಸಂಭವಿಸಿದ ಇನ್ನೊಂದು ನೂಕುನುಗ್ಗಲು ಪ್ರಕರಣದಲ್ಲಿ 12 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.







