ಅಗತ್ಯ ವಸ್ತುಗಳ ಬೆಲೆ ಏರಿಕೆ; ಜನಸಾಮಾನ್ಯರ ಪರದಾಟ
ಲಾರಿ ಮುಷ್ಕರದ ಬಿಸಿ; ಇಂದು ಬೃಹತ್ ಪ್ರತಿಭಟನೆ

ಬೆಂಗಳೂರು, ಎ.5: ವಿಮಾ ದರ ಏರಿಕೆ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಸಂಗ್ರಹಿಸಲು ಉದ್ದೇಶಿಸಿರುವುದನ್ನು ಕೈ ಬಿಡಬೇಕೆಂದು ಒತ್ತಾಯಿಸಿ ದಕ್ಷಿಣ ಭಾರತ ರಾಜ್ಯಗಳ ಲಾರಿ ಮಾಲಕರ ಸಂಘವು ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ, ಜನಸಾಮಾನ್ಯರು ಪರದಾಡುವಂತಾಗಿದೆ.
ಲಾರಿಗಳ ಮುಷ್ಕರದಿಂದಾಗಿ ಸರಕು, ಸಾಗಾಣಿಕೆ ಬಹುತೇಕ ಸ್ಥಗಿತಗೊಂಡಿದೆ. ಇದರಿಂದಾಗಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಎ.8ರಿಂದ ಈ ಮುಷ್ಕರವು ದೇಶವ್ಯಾಪ್ತಿ ನಡೆಯುವ ಸಾಧ್ಯತೆಗಳಿರುವುದರಿಂದ, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಗಳಿವೆ.
ವಿಮಾ ದರ ಏರಿಕೆಗೆ ಸಂಬಂಧಿಸಿದಂತೆ ಇತ್ತೀಚೆಗಷ್ಟೆ ಹೈದರಾಬಾದ್‌ನಲ್ಲಿ ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರ(ಐಆರ್‌ಡಿಎ)ದ ಜೊತೆ ನಡೆದ ಸಭೆಯಲ್ಲಿ ಯಾವುದೆ ಸ್ಪಷ್ಟ ತೀರ್ಮಾನ ಹೊರಬೀಳದ ಹಿನ್ನೆಲೆಯಲ್ಲಿ ಲಾರಿ ಮಾಲಕರು ತಮ್ಮ ಮುಷ್ಕರವನ್ನು ಮುಂದುವರೆಸಿದ್ದಾರೆ.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಹಾಲು, ಔಷಧಿ ಸೇರಿದಂತೆ ಇನ್ನಿತರ ಅಗತ್ಯವಸ್ತುಗಳನ್ನು ಹೊರತುಪಡಿಸಿ, ತರಕಾರಿ, ಅಕ್ಕಿ, ಬೇಳೆಕಾಳುಗಳು ಸೇರಿದಂತೆ ಇನ್ನಿತರ ವಸ್ತುಗಳ ಸಾಗಾಣಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರವು ಲಾರಿ ಮಾಲಕರ ಸಂಘದ ಬೇಡಿಕೆಗಳಿಗೆ ಸ್ಪಂದಿಸದೆ ಇರುವುದರಿಂದ ಎಪ್ರಿಲ್ 6ರಂದು ಬೆಳಗ್ಗೆ 11 ಗಂಟೆಗೆ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ಲಾರಿ ಮಾಲಕರು ನಡೆಸುತ್ತಿರುವ ಮುಷ್ಕರಕ್ಕೆ ಎ.8 ರಿಂದ ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಕೈ ಜೋಡಿಸುತ್ತಿರುವುದರಿಂದ, ಮುಷ್ಕರ ತೀವ್ರ ಸ್ವರೂಪ ಪಡೆಯುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.







