ಗೋರಕ್ಷಕರಿಂದ ಕೊಲೆ ಪ್ರಕರಣ: ದುಷ್ಕರ್ಮಿಗಳ ಸುಳಿವಿತ್ತವರಿಗೆ ಪುರಸ್ಕಾರ ಘೋಷಣೆ

ಜೈಪುರ,ಎ.5: ಶನಿವಾರ ತಥಾಕಥಿತ ಗೋರಕ್ಷಕರಿಂದ ಅಮಾನುಷವಾಗಿ ಥಳಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪೆಹ್ಲೂ ಖಾನ್ ಮೃತಪಟ್ಟ ಬಳಿಕ , ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರ ಮೇಲೆ ಒತ್ತಡ ಹೆಚ್ಚುತ್ತಿದ್ದು , ದುಷ್ಕರ್ಮಿಗಳ ಪತ್ತೆ ಗೆ ಸುಳಿವು ನೀಡಿದವರಿಗೆ ನಗದು ಪುರಸ್ಕಾರ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ.
ಇದುವರೆಗೆ ಆರು ಮಂದಿ ಶಂಕಿತರನ್ನು ಹೆಸರಿಸಲಾಗಿದ್ದು ಇವರ ಬಗ್ಗೆ ಸುಳಿವು ನೀಡಿದವರಿಗೆ (ಪ್ರತಿಯೊಬ್ಬ ದುಷ್ಕರ್ಮಿ ಸುಳಿವಿಗೆ ತಲಾ 5000 ರೂ. ) ನಗದು ಪುರಸ್ಕಾರ ನೀಡುವುದಾಗಿ ಘೋಷಿಸಲಾಗಿದೆ.
ಪೆಹ್ಲೂ ಖಾನ್ ಮರಣಹೊಂದುವ ಮೊದಲು ನೀಡಿದ ಹೇಳಿಕೆ ಮೇರೆಗೆ ಆಕ್ರಮಣಕಾರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶಿಕ್ಷಾರ್ಹ ನರಹತ್ಯೆ ಪ್ರಕರಣವನ್ನು ಇದೀಗ ಕೊಲೆ ಪ್ರಕರಣ ಎಂದು ಬದಲಾಯಿಸಲಾಗಿದೆ ಎಂದು ಆಲ್ವಾರ್‌ನ ಪೊಲೀಸ್ ಮುಖ್ಯಾಧಿಕಾರಿ ರಾಹುಲ್ ಪ್ರಕಾಶ್ ತಿಳಿಸಿದ್ದಾರೆ.
ಓಂ ಜಾದವ್, ಹುಕುಂ ಚಂದ್ ಯಾದವ್, ಸುಧೀರ್ ಯಾದವ್, ಜಗ್ಮಾಲ್ ಯಾದವ್, ನವೀನ್ ಶರ್ಮ ಮತ್ತು ರಾಹುಲ್ ಸೈನಿ ಅವರನ್ನು ಶಂಕಿತ ಆರೋಪಿಗಳೆಂದು ಗುರುತಿಸಲಾಗಿದ್ದು ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ 200 ಮಂದಿ ಗುರುತಿಸಲಾಗದ ವ್ಯಕ್ತಿಗಳ ವಿರುದ್ಧವೂ ಪ್ರಕರಣ ದಾಖಲಾಗಿದೆ. ಆರು ಪೊಲೀಸ್ ಠಾಣೆಗಳ ಅಧಿಕಾರಿಗಳನ್ನು ಒಳಗೊಂಡಿರುವ ಮೂರು ತಂಡಗಳು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿವೆ ಎಂದವರು ತಿಳಿಸಿದ್ದಾರೆ.







