ಉಡುಪಿ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಗೆ ಸಮಿತಿ ರಚನೆ: ಜಿಲ್ಲಾಧಿಕಾರಿ ನೇತೃತ್ವ ಸಭೆಯಲ್ಲಿ ತೀರ್ಮಾನ

ಉಡುಪಿ, ಎ.5: ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಹೊಳೆ ದಡದಲ್ಲಿರುವ ಅಕ್ರಮ ಶೆಡ್‌ಗಳನ್ನು ಹಾಗೂ ಅಲ್ಲಿ ಈ ಸಂಬಂಧ ಸಂಗ್ರಹಿಸಿ ಟ್ಟಿರುವ ಮೂಲ ಸೌಕರ್ಯಗಳನ್ನು ತಕ್ಷಣವೇ ತೆರವುಗೊಳಿಸಲು ಪೊಲೀಸರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ.
ಅಕ್ರಮಗಳನ್ನು ತಡೆಯಲು ಶೆಡ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಆದೇಶ ಹೊರಡಿಸಲಾಗಿದ್ದು, ಕಾರ್ಯಾಚರಣೆಗೆ ಸಮಯ ಮಿತಿಯನ್ನು ನಿಗದಿ ಪಡಿಸಲಾಗಿದೆ. ಕುಂದಾಪುರ, ಬ್ರಹ್ಮಾವರ, ಬೈಂದೂರುಗಳಲ್ಲಿ ಪೊಲೀಸ್ ಇಲಾಖೆಯೊಂದಿಗೆ ಕಾರ್ಯಾಚರಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.
ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್‌ನಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮದ ಕುರಿತು ಚರ್ಚಿಸಲು ಕರೆಯಲಾದ ಸಭೆಯಲ್ಲಿ, ದೋಣಿಗಳನ್ನು ಹಾಗೂ ಡ್ರೆಜ್ಜಿಂಗ್ ಮೆಷಿನ್‌ಗಳನ್ನು ಕ್ರೇನ್ ಉಪಯೋಗಿಸಿ ಜಪ್ತಿ ಮಾಡಲು ಇಲಾಖಾ ಸಮನ್ವಯ ಮಾಡಿ ಕರ್ತವ್ಯ ನಿರ್ವಹಿಸಲು ಜಿಲ್ಲಾಧಿಕಾರಿಗಳು ಆದೇಶ ನೀಡಿದರು.
ಅಕ್ರಮ ಮರಳುಗಾರಿಕೆ ನಿರ್ಬಂಧಿಸಲು ಜಿಲ್ಲೆಯಲ್ಲಿ ಸಿಆರ್‌ಪಿಸಿ ಸೆಕ್ಷನ್ 144ರ ಅಡಿಯಲ್ಲಿ ಆದೇಶ ಹೊರಡಿಸಿ ಅಕ್ರಮ ತಡೆಯಲು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಒತ್ತಿ ಹೇಳಿದರು.
ಇದಲ್ಲದೆ ಸಿಆರ್‌ಪಿಸಿ ಸೆಕ್ಷನ್ 110 ಅಡಿಯಲ್ಲಿ ಹಾಗೂ 107ರಡಿಯಲ್ಲಿ ಅಕ್ರಮ ಮರಳುಗಾರಿಕೆ ಮಾಡುವವರ ವಿರುದ್ದ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ.ಪಟ್ಟಾ ಜಮೀನಿನಲ್ಲೂ ಅಕ್ರಮ ಮರಳು ಸಂಗ್ರಹಕ್ಕೆ ಅವಕಾಶವಿಲ್ಲ ಸಂಗ್ರಹಿಸಿದವರಿಗೆ ನೋಟೀಸು ನೀಡಿ, ಕಾನೂನು ಪಾಲಿಸಿ. ವ್ಯವಸ್ಥೆಯು ಅಪಹಾಸ್ಯಕ್ಕೀಡಾಗದಂತೆ ಪಕ್ಕಾ ಕಾನೂನು ಪರಿಪಾಲನೆಯಾಗಲಿ ಎಂದು ಪ್ರಿಯಾಂಕ ಸ್ಪಷ್ಟ ನಿರ್ದೇಶನ ನೀಡಿದರು.
ಹೊರರಾಜ್ಯದಿಂದ ಮರಳು ಬರುವ ಸಂದರ್ಭ ಪರ್ಮಿಟ್ ಪರಿಶೀಲಿಸಿ. ಒಂದು ವಾರದೊಳಗಾಗಿ ಅಕ್ರಮ ಮರಳುಗಾರಿಕೆ ತಡೆಯಲು ಯುದ್ಧೋಪಾದಿಯಲ್ಲಿ ಕರ್ತವ್ಯ ನಿರ್ವಹಿಸಿ ಎಂದವರು ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ಟಿ ಬಾಲಕೃಷ್ಣ ಮಾತನಾಡಿ, ಅಕ್ರಮ ಮರಳುಗಾರಿಕೆ ತಡೆಯಲು ಪೊಲೀಸ್ ಇಲಾಖೆ ಸರ್ವ ಸಹಕಾರ ನೀಡಲು ಬದ್ಧವಾಗಿದೆ ಎಂದರು. ಸ್ಕ್ವಾಡ್ ರಚಿಸಲಾಗಿದ್ದು ಇವರು ತಮ್ಮ ಕರ್ತವ್ಯ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕುಂದಾಪುರದಲ್ಲಿ ಮರಳು ಮಾಫಿಯಾ ತಡೆಗೆ ಪ್ರತ್ಯೇಕವಾದ ಪೊಲೀಸ್ ತಂಡವನ್ನೂ ರಚಿಸಲಾಗಿದೆ ಎಂದು ಎಸ್ಪಿ ಹೇಳಿದರು.
ಆರ್‌ಟಿಒದವರು ಇನ್ನು ಮುಂದೆ ಇಂತಹ ಲಾರಿಗಳಿಗೆ ದಂಡ ವಿಧಿಸಿ ಬಿಡಲು ಅವಕಾಶವಿಲ್ಲ.ಇಂತಹವರ ಪರ್ಮಿಟ್ ರದ್ದು ಮಾಡಲು ಕ್ರಮಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದರು.
ಪಿಡಬ್ಲ್ಯುಡಿ, ಕೆಆರ್‌ಐಡಿಎಲ್, ನಿರ್ಮಿತಿಯವರು ಮರಳುಗಾರಿಕೆ ತಡೆಗೆ ಎಲ್ಲ ಬೆಂಬಲ ನೀಡಲಿದ್ದು, ಜಿಲ್ಲೆಯ ಜನರಿಗೆ ಮರಳು ಲಭ್ಯವಾಗಿಸಲು ಗಣಿ ಇಲಾಖೆ, ಪಿಡಬ್ಲ್ಯುಡಿ, ಕೆಆರ್‌ಐಡಿಎಲ್ ಸಜ್ಜಾಗಿದೆ. ಜಿಲ್ಲೆಯಲ್ಲಿ ಒಟ್ಟು 60,000 ಟನ್ ಮರಳು ನಿರ್ಮಾಣ ಕಾಮಗಾರಿಗಳಿಗೆ ಲ್ಯವಿದೆ ಎಂದರು.
ಮರಳಿನ ಅಗತ್ಯವಿರುವವರು ಸಹಾಯಕ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ನಂ.2ನೇ ಉಪವಿಬಾಗ, ಬೊಬ್ಬರ್ಯಕಟ್ಟೆ ಬಳಿ, ಕುಂದಾಪುರ (9448428545), ಹಿರಿಯ ಭೂ ವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ರಜತಾದ್ರಿ ಮಣಿಪಾಲ, (9008599623) ಮತ್ತು ಕಾರ್ಯಪಾಲಕ ಅಭಿಯಂತರರು, ಕೆ.ಆರ್.ಐ.ಡಿ.ಎಲ್, ರಜತಾದ್ರಿ, ಮಣಿಪಾಲ (9449534792) ಇವರಲ್ಲಿ ಮರಳಿನ ಬೇಡಿಕೆಯನ್ನು ಸಲ್ಲಿಸ ಬಹುದು ಎಂದೂ ಸಭೆಗೆ ತಿಳಿಸಲಾಯಿತು.
ಕಾನೂನು ಪ್ರಕಾರ ಮರಳುಗಾರಿಕೆ ನಡೆಸುವ ಲಾರಿಗಳಿಗೆ ಜಿಪಿಎಸ್ ಅಳವಡಿಸುವಂತೆ, ಚೆಕ್‌ಪೋಸ್ಟ್‌ಗಳಲ್ಲಿರುವ ಕ್ಯಾಮರಾಗಳಲ್ಲಿ ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆ ದಾಖಲಾಗುವಂತೆ ನೋಡಿಕೊಳ್ಳಿ ಎಂದ ಜಿಲ್ಲಾಧಿಕಾರಿ, ಇಲಾಖೆಯಲ್ಲಿ ಲಭ್ಯವಿರುವ ಮರಳಿನ ಗುಣಮಟ್ಟ ಉತ್ತಮವಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಅನುರಾಧ, ಸಹಾಯಕ ಆಯುಕ್ತೆ ಶಿಲ್ಪಾನಾಗ್, ಜಿಲ್ಲೆಯ ಎಲ್ಲ ತಹಶೀಲ್ದಾರ್‌ಗಳು, ಎಸಿಎಫ್ ಅಚ್ಚಪ್ಪ, ಗಣಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.







