ನಿಯಮಗಳ ಉಲ್ಲಂಘನೆ: ಆಹಾರ ಪೂರೈಕೆ ಗುತ್ತಿಗೆದಾರರ ವಿರುದ್ಧ ರೈಲ್ವೆಯ ಕಠಿಣ ಕ್ರಮ

ಹೊಸದಿಲ್ಲಿ,ಎ.5: ನಿಯಮಗಳನ್ನು ಉಲ್ಲಂಘಿಸುವ ಆಹಾರ ಪೂರೈಕೆ ಗುತ್ತಿಗೆದಾರರ ವಿರುದ್ಧ ಭಾರತೀಯ ರೈಲ್ವೆಯು ಕಠಿಣ ಕ್ರಮಗಳನ್ನು ಜರುಗಿಸುತ್ತಿದೆ. ಆಹಾರ ಗುತ್ತಿಗೆಯೊಂದನ್ನು ರದ್ದುಗೊಳಿಸಿರುವ ಅದು 16 ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿದೆಯಲ್ಲದೆ, ಕಳೆದೊಂದು ವರ್ಷದಲ್ಲಿ ಆಹಾರ ಪೂರೈಕೆ ಕುರಿತು ದೂರುಗಳಿಗೆ ಸಂಬಂಧಿಸಿದ 2,108 ಪ್ರಕರಣಗಳಲ್ಲಿ 1.8 ಕೋ.ರೂ.ದಂಡವನ್ನು ವಸೂಲು ಮಾಡಿದೆ.
ಪ್ರಯಾಣಿಕರಿಗೆ ಉತ್ತಮ ಮತ್ತು ಆರೋಗ್ಯಕರ ಆಹಾರವನ್ನು ಒದಗಿಸುವ ತನ್ನ ಪ್ರಯತ್ನದ ಅಂಗವಾಗಿ ರೈಲ್ವೆಯು ಕೇಟರಿಂಗ್ ಕುರಿತಂತೆ ದೂರುಗಳನ್ನು ಬಗೆಹರಿಸಲು ವಿವಿಧ ಸ್ತರಗಳಲ್ಲಿ ನಿಯಮಿತ ತಪಾಸಣೆಗಳ ಮೂಲಕ ಆಹಾರದ ಗುಣಮಟ್ಟದ ಮೇಲೆ ನಿಗಾಯಿರಿಸಲು ಸಾಂಸ್ಥಿಕ ವ್ಯವಸ್ಥೆ (ಸಿಎಸ್‌ಎಂಸಿ)ಯೊಂದನ್ನು ಕಾರ್ಯಾರಂಭಿಸಿದೆ. ಕೇಟರಿಂಗ್ ಕುರಿತು ದೂರುಗಳನ್ನು ಸ್ವೀಕರಿಸಲೆಂದೇ ಉಚಿತ ದೂರವಾಣಿ ಸಂಖ್ಯ 138ರ ಜೊತೆಗೆ ಇನ್ನೊಂದು ಉಚಿತ ಸಂಖ್ಯೆ (1800-111-321)ಯನ್ನು ಒದಗಿಸಲಾಗಿದೆ.
ಸಿಎಸ್‌ಎಂಸಿ ದಿನವೊಂದಕ್ಕೆ 200ರಿಂದ 250 ಪ್ರಯಾಣಿಕರ ದೂರುಗಳಿಗೆ ತಕ್ಷಣ ಸ್ಪಂದಿಸಿ ನೆರವಾಗುತ್ತಿದೆ ಎಂದು ರೈಲೈ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ಕೇಟರಿಂಗ್ ಸೇವೆಗಳಿಗೆ ಸಂಬಂಧಿಸಿದಂತೆ ದೂರುಗಳು ಮತ್ತು ಸಲಹೆಗಳಿಗಾಗಿ ರೈಲ್ವೆಯ ಟ್ವಿಟರ್ ಹ್ಯಾಂಡಲ್ ಕೂಡ ಕಾರ್ಯ ನಿರ್ವಹಿಸುತ್ತಿದೆ. 357 ಪ್ರಮುಖ ನಿಲ್ದಾಣಗಳಲ್ಲಿ ಇ-ಕೇಟರಿಂಗ್ ಸೌಲಭ್ಯವನ್ನೂ ಆರಂಭಿಸಲಾಗಿದೆ.