" ಸುನೀಲ್ ನಾಯ್ಕರನ್ನು ವಜಾ ಮಾಡಿ"
ಬಂಟ್ವಾಳ ಪಿಎಫ್‌ಐಯಿಂದ ಪ್ರತಿಭಟನೆ

ಬಂಟ್ವಾಳ, ಎ. 5: ಮಂಗಳೂರು ಸಿಸಿಬಿ ಪೊಲೀಸ್ ಅಧಿಕಾರಿ ಸುನೀಲ್ ನಾಯ್ಕಾರಿಗೆ ಮತಿಭ್ರಮಣೆಯಾಗಿದೆ. ಮುಸ್ಲಿಮರ ಮೇಲೆ ಪೂರ್ವಾಗ್ರಹ ಪೀಡಿತವಾಗಿರುವ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಇಲ್ಲವಾದರೆ ದ.ಕ. ಜಿಲ್ಲೆಯ ಮುಸ್ಲಿಮ್ ಯುವಕರಿಗೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಕಮಿಷನರ್ ಸಹಿತ ಉನ್ನತ ಪೊಲೀಸ್ ಅಧಿಕಾರಿಗಳಿಗೆ, ಜಿಲ್ಲೆಯ ಜನಪ್ರತಿನಿಧಿಗಳಿಗೆ ಈ ಹಿಂದೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿತ್ತು. ಅದರಂತೆ ಸುನೀಲ್ ನಾಯ್ಕಾನನ್ನು ವರ್ಗಾವಣೆ ಮಾಡಿದ್ದರೆ ಅಹ್ಮದ್ ಖುರೈಷಿಯ ಕಿಡ್ನಿಗಳು ವಿಫಲವಾಗುತ್ತಿರಲಿಲ್ಲ ಎಂದು ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಹೇಳಿದರು.
ಪೊಲೀಸ್ ದೌರ್ಜನ್ಯ ಮತ್ತು ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್, ಬಂಧನವನ್ನು ವಿರೋಧಿಸಿ ಪಿಎಫ್‌ಐನ ಬಂಟ್ವಾಳ ತಾಲೂಕು ಸಮಿತಿಯಿಂದ ಬುಧವಾರ ಬಿ.ಸಿ.ರೋಡಿನಲ್ಲಿ ನಡೆದ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ನ್ಯಾಯಕ್ಕಾಗಿ ಪ್ರತಿಭಟನೆಯ ದಾರಿ ಹಿಡಿಯುವುದು ಸಂವಿಧಾನ ನೀಡಿದ ಹಕ್ಕಾಗಿದ್ದು ಅದನ್ನು ಹತ್ತಿಕ್ಕಿರುವ ಕಮಿಷನರ್ ಕ್ರಮ ಸಂವಿಧಾನ ವಿರೋಧಿಯಾಗಿದೆ ಎಂದು ಕಿಡಿಕಾರಿದರು.
ಸಿಸಿಬಿ ಪೊಲೀಸ್ ಸುನೀಲ್ ನಾಯ್ಕ, ಕಮಿಷನರ್ ಚಂದ್ರಶೇಖರ್ ಸಹಿತ ಯುವಕನಿಗೆ ಚಿತ್ರಹಿಂಸೆ ನೀಡಿರುವ ಎಲ್ಲ ಪೊಲೀಸರನ್ನು ಸರಕಾರ ಕೂಡಲೇ ವಜಾ ಮಾಡಬೇಕು. ರಾಜ್ಯ ಲಾಠಿಚಾರ್ಜ್‌ನಿಂದ ಪ್ರತಿಭಟನೆ ನಿಂತಿದೆ ಹೊರತು ಖುರೈಶಿ ಪರ ಹೋರಾಟ ನಿಂತಿಲ್ಲ ಎಂದರು.
ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಮೂಲಕ ರಾಜ್ಯ ಗೃಹ ಸಚಿವ ಡಾ. ಪರಮೇಶ್ವರ್‌ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಪಿಎಫ್‌ಐ ಮುಖಂಡ ಎ.ಕೆ.ಇಮ್ತಿಯಾಝ್ ತುಂಬೆ ಮಾತನಾಡಿದರು. ಸಲೀಮ್‌ಪರಂಗಿಪೇಟೆ, ಝಕರಿಯಾ ಕಲ್ಲಡ್ಕ, ಇಸಾಕ್ ಶಾಂತಿಅಂಗಡಿ, ಪುರಸಭಾ ಸದಸ್ಯ ಮುನೀಶ್ ಅಲಿ, ಅಬೂಬಕರ್ ಸಿದ್ದೀಕ್‌ಮೊದಲಾದವರು ಇದ್ದರು.







