ಕಲ್ಲಂಗಳ ಕೇಪು: ವಿದ್ಯಾರ್ಥಿಗಳಿಗಾಗಿ ಯಕ್ಷಗಾನ ಉಚಿತ ತರಗತಿ ಆರಂಭ

ವಿಟ್ಲ, ಎ.5: ಕಲ್ಲಂಗಳ ಕೇಪು ಸರಕಾರಿ ಪ್ರೌಢ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆಯುವ ಯಕ್ಷಗಾನ ಉಚಿತ ತರಗತಿಗಳನ್ನು ಕೇಪು ಪ್ರಾಥಮಿಕ ಶಾಲಾ ಪುಟಾಣಿ ವಿದ್ಯಾರ್ಥಿನಿ ಶರಣ್ಯ ಉದ್ಘಾಟಿಸಿದರು. ಕೇಪು ಸರಕಾರಿ ಪ್ರೌಢ ಶಾಲಾ ವಿದ್ಯಾರ್ಥಿ ಉಪ ನಾಯಕಿ ಯಶಶ್ವಿನಿ ಅಧ್ಯಕ್ಷತೆ ವಹಿಸಿದರು.
ರಮೇಶ ಎಂ ಬಾಯಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕರಾವಳಿ ಜಿಲ್ಲೆಗಳ ಗಂಡುಕಲೆಯೆನಿಸಿದ ಯಕ್ಷಗಾನ ಉಚಿತ ತರಗತಿಗಳನ್ನು ಯಕ್ಷಲೋಕವು ಪ್ರಾಯೋಜಿಸಿದ್ದು ಪ್ರತೀ ರವಿವಾರ ತರಗತಿಗಳು ನಡೆಯಲಿವೆ ಎಂದರು.
ಯಕ್ಷಲೋಕ ಇದರ ಸಂಚಾಲಕ ಭಾಸ್ಕರ ಅಡ್ವಳ ಮಾತನಾಡಿ, ಮಕ್ಕಳ ಸಕ್ರಿಯ ಭಾಗವಹಿಸುವಿಕೆ ಅಗತ್ಯ. ಇಂದು ಶಿಕ್ಷಣದ ಬಗ್ಗೆ ರಾಜ್ಯ ಸರಕಾರ ದಿವ್ಯ ನಿರ್ಲಕ್ಷ್ಯ ತಾಳಿದೆ. ಕೇರಳ ಮದರಿಯ ಶೈಕ್ಷಣಿಕ ಅನುಕೂಲತೆಗಳನ್ನು ಇಲ್ಲೂ ಅಳವಡಿಸಿ ಶಿಕ್ಷಣದ ಹಲವು ಗಲೀಜುಗಳನ್ನು ತಿಳಿಗೊಳಿಸುವ ಅಗತ್ಯವಿದೆಯೆಂದು ಒತ್ತಾಯಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಮಾಲತಿ ಕಾನತಡ್ಕ ಮಾತನಾಡಿ ಯಕ್ಷಗಾನ ತರಗತಿಯು ಕಲ್ಲಂಗಳ ಪ್ರೌಢ ಶಾಲೆ ಮಾತ್ರವಲ್ಲದೆ ಆಸುಪಾಸಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಆಸಕ್ತ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ. ಎಲ್ಲರೂ ಸದ್ವಿನಿಯೋಗಿಸುವಂತೆ ವಿನಂತಿಸಿದರು.
ಶಾಲಾ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಅಬ್ದುಲ್ ಕರೀಂ ಮಾತನಾಡಿ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದುದಕ್ಕಾಗಿ ಯ್ಷಲೋಕಕ್ಕೆ ಅಭಿನಂದನೆ ಹೇಳಿದರು. ಸಹಶಿಕ್ಷಕ ಲಕ್ಷ್ಮಣ ಟಿ. ನಾಯ್ಕೆ ಮಾತನಾಡಿದರು.
ಶಿಕ್ಷಕರಾದ ಲಿಂಗಪ್ಪ ನಾಯ್ಕ, ಗೌರಿದೇವಿ, ಪುಷ್ಪಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಹರ್ಷಿತಾ ಕೆ.ಟಿ ವಂದಿಸಿದರು. ಸೌಜನ್ಯ ಸ್ವಾಗತಿಸಿದರು. ಕ್ಷಿತಿಜ್ ವಂದಿಸಿದರು.







