ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್: ಮೊದಲ ಸುತ್ತಿನಲ್ಲೇ ಸಿಂಧು, ಸೈನಾಗೆ ಸೋಲು
ಕೌಲಾಲಂಪುರ, ಎ.5: ವಿಶ್ವದ ಮಾಜಿ ನಂ.1 ಆಟಗಾರ್ತಿ ಸೈನಾ ನೆಹ್ವಾಲ್ ಹಾಗೂ ಪಿ.ವಿ. ಸಿಂಧು ಬುಧವಾರ ಆರಂಭವಾದ ಮಲೇಷ್ಯಾ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದಾರೆ.
ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸೈನಾ ಅವರು ನಾಲ್ಕನೆ ಶ್ರೇಯಾಂಕಿತೆ ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ 21-19, 13-21, 15-21 ಅಂಕಗಳ ಅಂತರದಿಂದ ಸೋತಿದ್ದಾರೆ.
ಮತ್ತೊಂದು ಪಂದ್ಯದಲ್ಲಿ ಸಿಂಧು ಚೀನಾದ ಚೆನ್ ಯೂಫೆ ವಿರುದ್ಧ 21-18, 19-21,17-21 ಅಂಕಗಳ ಅಂತರದಿಂದ ಶರಣಾಗಿದ್ದಾರೆ.
ಕಳೆದ ವಾರ ಹೊಸದಿಲ್ಲಿಯ ಸಿರಿ ಫೋರ್ಟ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದಿದ್ದ ಇಂಡಿಯಾ ಓಪನ್ ಸೂಪರ್ ಸಿರೀಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸೈನಾ ನೆಹ್ವಾಲ್ ಅವರು ಪಿ.ವಿ. ಸಿಂಧು ವಿರುದ್ಧ ಸೋತಿದ್ದರು. ಸಿಂಧು ಇಂಡಿಯಾ ಓಪನ್‌ನ ಫೈನಲ್‌ಗೆ ತಲುಪಿ ಒಲಿಂಪಿಕ್ಸ್ ಚಾಂಪಿಯನ್ ಕರೋಲಿನಾ ಮರಿನ್‌ರನ್ನು ಮಣಿಸಿ ಚೊಚ್ಚಲ ಇಂಡಿಯಾ ಓಪನ್ ಪ್ರಶಸ್ತಿ ಜಯಿಸಿದ್ದರು.
56 ನಿಮಿಷಗಳಲ್ಲಿ ಕೊನೆಗೊಂಡಿದ್ದ ಮೊದಲ ಸುತ್ತಿನ ಪಂದ್ಯದಲ್ಲಿ ಸೈನಾ ಅವರು ಮೊದಲ ಗೇಮ್‌ನ್ನು 21-19 ರಿಂದ ಗೆದ್ದುಕೊಂಡು ಉತ್ತಮ ಆರಂಭವನ್ನು ಪಡೆದಿದ್ದರು. ಆದರೆ, ಆ ನಂತರ ತನ್ನಹಿಡಿತವನ್ನು ಕಳೆದುಕೊಂಡ ಸೈನಾ ಎರಡನೆ ಹಾಗೂ 3ನೆ ಗೇಮ್‌ನಲ್ಲಿ ಸೋತು ಟೂರ್ನಿಯಿಂದ ನಿರ್ಗಮಿಸಿದರು.
ಸಿಂಧುಗೆ ವೀರೋಚಿತ ಸೋಲು: ಇದೇ ವೇಳೆ, 67 ನಿಮಿಷಗಳ ಕಾಲ ನಡೆದಿದ್ದ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಸಿಂಧು ಅವರು ಚೆನ್ ಯೂಫೆ ವಿರುದ್ಧ ವೀರೋಚಿತ ಸೋಲುಂಡರು. ಮೂರು ಗೇಮ್‌ಗಳು ತೀವ್ರ ಪೈಪೋಟಿಯಿಂದ ಕೂಡಿದ್ದವು. ಸಿಂಧು ಮೊದಲ ಗೇಮ್‌ನ್ನು 21-18 ಅಂಕಗಳಿಂದ ಜಯ ಸಾಧಿಸಿ ಮುನ್ನಡೆ ಸಾಧಿಸಿದ್ದರು. ಆದರೆ, ಎರಡು ಹಾಗೂ 3ನೆ ಸೆಟ್‌ನಲ್ಲಿ ತಿರುಗಿ ಬಿದ್ದ ಚೀನಾದ ಆಟಗಾರ್ತಿ ಕ್ರಮವಾಗಿ 21-19 ಹಾಗೂ 21-17 ಅಂಕಗಳಿಂದ ಜಯ ಸಾಧಿಸಿದರು.
ಜಯರಾಮ್‌ಗೆ ಜಯ: ಭಾರತದ ಪಾಳಯದಲ್ಲಿ ಪುರುಷರ ವಿಭಾಗದಿಂದ ಸಿಹಿ ಸುದ್ದಿ ಲಭಿಸಿದೆ. ಪುರುಷರ ಸಿಂಗಲ್ಸ್‌ನಲ್ಲಿ ಅಜಯ್ ಜಯರಾಮ್ 2ನೆ ಸುತ್ತಿಗೆ ತಲುಪಿದ್ದಾರೆ.
ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಜಯರಾಮ್ ಚೀನಾದ ಕ್ವಿಯಾನ್ ಬಿನ್‌ರನ್ನು 21-11, 21-8 ಅಂಕಗಳ ಅಂತರದಿಂದ ಸುಲಭವಾಗಿ ಮಣಿಸಿದರು.







