ಟ್ವೆಂಟಿ-20: ಶ್ರೀಲಂಕಾಕ್ಕೆ ಶರಣಾದ ಬಾಂಗ್ಲಾ
ಪೆರೇರ ಆಕರ್ಷಕ ಅರ್ಧಶತಕ

ಕೊಲಂಬೊ, ಎ.5: ಕುಶಾಲ್ ಪೆರೇರ(77 ರನ್, 53 ಎಸೆತ) ಬಾರಿಸಿದ ಮಿಂಚಿನ ಅರ್ಧಶತಕದ ಸಹಾಯದಿಂದ ಶ್ರೀಲಂಕಾ ತಂಡ ಬಾಂಗ್ಲಾದೇಶ ವಿರುದ್ಧದ ಮೊದಲ ಅಂತಾರಾಷ್ಟ್ರೀಯ ಟ್ವೆಂಟಿ-20 ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಜಯ ಸಾಧಿಸಿದೆ.
ಈ ಗೆಲುವಿನ ಮೂಲಕ ಸಿಂಹಳೀಯರು 2 ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದರು.
ಪಂದ್ಯ ಆರಂಭವಾಗಲು ಕೆಲವೇ ನಿಮಿಷವಿರುವಾಗ ಫಿಟ್‌ನೆಸ್ ಟೆಸ್ಟ್‌ನಲ್ಲಿ ಪಾಸಾಗಿದ್ದ ಪೆರೇರ ಮಂಗಳವಾರ ರಾತ್ರಿ ಇಲ್ಲಿ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ 53 ಎಸೆತಗಳನ್ನು ಎದುರಿಸಿ 9 ಬೌಂಡರಿ, 1 ಸಿಕ್ಸರ್ ನೆರವಿನಿಂದ 77 ರನ್ ಗಳಿಸಿದರು. ಪರೇರ ಸಾಹಸದಿಂದ ಶ್ರೀಲಂಕಾ ತಂಡ 158 ರನ್ ಗುರಿಯನ್ನು 4 ವಿಕೆಟ್‌ಗಳ ನಷ್ಟಕ್ಕೆ 18.5 ಓವರ್‌ಗಳಲ್ಲಿ ತಲುಪಿತು.
ಪರೇರ ಹಾಗೂ ನಾಯಕ ಉಪುಲ್ ತರಂಗ(24 ರನ್) ಮೊದಲ ವಿಕೆಟ್‌ಗೆ 65 ರನ್ ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟರು.
ಪಂದ್ಯ ಆರಂಭಕ್ಕೆ ಮೊದಲು ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಬಾಂಗ್ಲಾದೇಶದ ನಾಯಕ ಮಶ್ರಾಫೆ ಮೊರ್ತಝಾ ತರಂಗ ಹಾಗೂ ಮುನವೀರ ವಿಕೆಟ್‌ಗಳನ್ನು ಕಬಳಿಸಿ ಶ್ರೀಲಂಕಾಕ್ಕೆ ನಡುಕ ಹುಟ್ಟಿಸಿದ್ದರು. ತಂಡದ ಗೆಲುವಿಗೆ 11ರನ್ ಅಗತ್ಯವಿದ್ದಾಗ ಪೆರೇರ ಅವರು ತಸ್ಕಿನ್ ಅಹ್ಮದ್‌ಗೆ ವಿಕೆಟ್ ಒಪ್ಪಿಸಿದರು. ಸೀಕುಗೆ ಪ್ರಸನ್ನ(ಅಜೇಯ 22) ಹಾಗೂ ತಿಸಾರ ಪೆರೇರ(ಅಜೇಯ 4) ತಂಡವನ್ನು 18.5 ಓವರ್‌ಗಳಲ್ಲಿ ಗೆಲುವಿನ ದಡ ಸೇರಿಸಿದರು. ಮುಶ್ರಾಫೆ(2-32) 2 ವಿಕೆಟ್ ಪಡೆದರು.
ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 155 ರನ್ ಗಳಿಸಿತು. ಮೊಸಾದೆಕ್ ಹುಸೈನ್(ಅಜೇಯ 34, 30ಎಸೆತ, 3 ಬೌಂಡರಿ) ತಂಡದ ಪರ ಸರ್ವಾಧಿಕ ರನ್ ಗಳಿಸಿದರು. ಶ್ರೀಲಂಕಾದ ಶಿಸ್ತುಬದ್ಧ ಬೌಲಿಂಗ್‌ಗೆ ತತ್ತರಿಸಿದ ಬಾಂಗ್ಲಾದೇಶ ಒಂದು ಹಂತದಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 85 ರನ್ ಗಳಿಸಿ ಸಂಕಷ್ಟದಲ್ಲಿತ್ತು. ಆಗ ಮಹ್ಮೂದುಲ್ಲಾ(31, 26 ಎಸೆತ, 3 ಬೌಂಡರಿ) ಅವರೊಂದಿಗೆ 6ನೆ ವಿಕೆಟ್‌ಗೆ 57 ರನ್ ಜೊತೆಯಾಟ ನಡೆಸಿದ ಹುಸೈನ್ ತಂಡಕ್ಕೆ ಆಸರೆಯಾದರು.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿದ್ದ ಬಾಂಗ್ಲಾದೇಶ ಇನಿಂಗ್ಸ್‌ನ 2ನೆ ಎಸೆತದಲ್ಲಿ ತಮೀಮ್ ಇಕ್ಬಾಲ್ ವಿಕೆಟ್ ಕಳೆದುಕೊಂಡಿತು. ಆಗ 2ನೆ ವಿಕೆಟ್‌ಗೆ 57 ರನ್ ಜೊತೆಯಾಟ ನಡೆಸಿದ ಸೌಮ್ಯ ಸರ್ಕಾರ್(29) ಹಾಗೂ ಶಬ್ಬೀರ್ರಹ್ಮಾನ್(16) ತಂಡವನ್ನು ಹಳಿಗೆ ತಂದರು. ಶಬ್ಬೀರ್ರಹ್ಮಾನ್ ರನೌಟಾದ ತಕ್ಷಣ ಬಾಂಗ್ಲಾ ಕುಸಿತದ ಹಾದಿ ಹಿಡಿಯಿತು.
ಸೌಮ್ಯ ಸರ್ಕಾರ್, ಮುಶ್ಫಿಕುರ್ರಹೀಂ(11) ಹಾಗೂ ಶಾಕಿಬ್ ಅಲ್ ಹಸನ್(11) ಬೆನ್ನುಬೆನ್ನಿಗೆ ಔಟಾದರು. ಲಂಕೆಯ ಪರ ಲಸಿತ್ ಮಾಲಿಂಗ(2-38) ಯಶಸ್ವಿ ಬೌಲರ್ ಎನಿಸಿಕೊಂಡರು.
ಎರಡನೆ ಹಾಗೂ ಕೊನೆಯ ಪಂದ್ಯ ಎ.6 ರಂದು ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ: 20 ಓವರ್‌ಗಳಲ್ಲಿ 155/6
(ಹುಸೈನ್ ಅಜೇಯ 34, ಮಹ್ಮೂದುಲ್ಲಾ 31, ಸರ್ಕಾರ್ 29, ಮಾಲಿಂಗ 2-38)
ಶ್ರೀಲಂಕಾ: 18.5 ಓವರ್‌ಗಳಲ್ಲಿ 158/4
ಪೆರೇರ 77, ತರಂಗ 24, ಪ್ರಸನ್ನ ಅಜೇಯ 22, ಮೊರ್ತಝಾ 2-32)
ಪಂದ್ಯಶ್ರೇಷ್ಠ: ಕುಶಾಲ್ ಪೆರೇರ.







